ಕರ್ನಾಟಕ

karnataka

ETV Bharat / state

ಆನಂದ್ ಅಸ್ನೋಟಿಕರ್ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ: ವೆಂಕಟೇಶ ನಾಯಕ

ಆನಂದ್ ಅಸ್ನೋಟಿಕರ್ ರಾಜಕೀಯವಾಗಿ ದಿವಾಳಿ ಹೊಂದುತ್ತಿದ್ದಾರೆ. ತಮ್ಮ ರಾಜಕೀಯ ಭವಿಷ್ಯವನ್ನು ದೇವೇಗೌಡರು ನಿರ್ಧಾರ ಮಾಡುತ್ತಾರೆಂದು ಅವರೇ ಸ್ವತಃ ಹೇಳಿದ್ದಾರೆ. ಇದೀಗ ಆನಂದ್​ಗೆ ಮಾತನಾಡಲು ಯಾವುದೇ ವಿಷಯ ಸಿಗದೆ ಸಂಸದ ಅನಂತಕುಮಾರ್ ಹೆಗಡೆ ಅನಾರೋಗ್ಯದ ವಿಷಯವನ್ನು ಎಳೆದು ತಂದು ಕೀಳು ಮಟ್ಟದ ರಾಜಕೀಯ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಆರೋಪಿಸಿದ್ದಾರೆ.

By

Published : Apr 7, 2021, 7:45 AM IST

ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ

ಕಾರವಾರ: ರಾಜಕೀಯವಾಗಿ, ವೈಚಾರಿಕವಾಗಿ ದಿವಾಳಿಯಾಗಿರುವ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಮಾತನಾಡಲು ಯಾವುದೇ ವಿಷಯ ಸಿಗದೆ ಸಂಸದ ಅನಂತಕುಮಾರ್ ಹೆಗಡೆ ಅನಾರೋಗ್ಯದ ವಿಷಯವನ್ನು ಎಳೆದು ತಂದು ಕೀಳು ಮಟ್ಟದ ರಾಜಕೀಯ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ

ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನಂದ್ ರಾಜಕೀಯವಾಗಿ ದಿವಾಳಿ ಹೊಂದುತ್ತಿದ್ದಾರೆ. ತಮ್ಮ ರಾಜಕೀಯ ಭವಿಷ್ಯವನ್ನು ದೇವೇಗೌಡರು ನಿರ್ಧಾರ ಮಾಡುತ್ತಾರೆಂದು ಅವರೇ ಸ್ವತಃ ಹೇಳಿದ್ದಾರೆ. ಸಂಸದರ ಭವಿಷ್ಯವನ್ನು ಸ್ವತಃ ಅವರೇ ಕಟ್ಟಿಕೊಂಡು, ಸಂಘಟನೆಗಳ ಮೂಲಕ ಕೇಂದ್ರ ಸಚಿವರೂ ಆದರು. ಆದರೆ ಆನಂದ್ ಅವರ ಭವಿಷ್ಯವನ್ನು ಮತ್ತೊಬ್ಬರು ನಿರ್ಧರಿಸುವಂತಹ ಪರಿಸ್ಥಿತಿಗೆ ಬಂದಿರುವುದನ್ನು ಅವರೇ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ ನಾಯಕ ಮಾತನಾಡಿ, ಆನಂದ್ ಅಸ್ನೋಟಿಕರ್ ದೈಹಿಕವಾಗಿ ಬಹಳ ಸದೃಢರಾಗಿದ್ದಾರೆ. ಆದರೆ ಮಾನಸಿಕವಾಗಿ ಖಬರಸ್ತಾನ ಸೇರಿ ಎಷ್ಟೋ ವರ್ಷಗಳಾಗಿದೆ. ಈ ಹಿಂದೆ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರು ಸಂಸದರನ್ನು ಕುಲ ದೇವ್ರು ಎಂದು ಕರೆಯುತ್ತಿದ್ದರು. ಯಾರಾದರೂ ಕುಲ ದೇವ್ರು ಸಾಯ್ಲಿ ಎಂದು ಬಯಸುತ್ತಾರಾ? ಎಂದು ಪ್ರಶ್ನಿಸಿದರು.

ನಮ್ಮ ಜಿಲ್ಲೆಯ ರಾಜಕಾರಣಿಗಳಲ್ಲಿ ಒಳ್ಳೆಯ ಸಂಸ್ಕೃತಿ, ಸಭ್ಯತೆ ಇರುವವರು ಇದ್ದಾರೆ. ನಮ್ಮ ನಡುವೆ ಪಕ್ಷ ಭೇದವಿದೆಯೇ ಹೊರತು ವೈಯಕ್ತಿಕವಾಗಿ ಯಾವುದೇ ದ್ವೇಷ ಇಲ್ಲ. ಹೀಗಿರುವಾಗ ಅನಾರೋಗ್ಯಕ್ಕೆ ಒಳಗಾಗಿರುವ ಸಂಸದರನ್ನು ಈ ರೀತಿ ಸತ್ತರೆ ಒಳ್ಳೆಯದಿತ್ತು ಎಂದು ಸಂತೋಷ ಪಡುವುದನ್ನು ಖಂಡಿಸುತ್ತೇವೆ. ಇದು ಜಿಲ್ಲೆಯ, ದೇಶದ, ನೆಲದ ಸಂಸ್ಕೃತಿಯಲ್ಲ ಎಂದರು.

ಆನಂದ್ ಈ ಕ್ಷೇತ್ರದ ಮಾಜಿ ಶಾಸಕ, ಸಚಿವರಾಗಿದ್ದವರು. ಇಲ್ಲಿನ ಯುವ ಸಮುದಾಯಕ್ಕೆ ಅವರು ಮಾದರಿಯಾಗಬೇಕಿತ್ತು. ಇನ್ನೊಬ್ಬನ ಚಿತೆಯಲ್ಲಿ ಬೀಡಿ ಹಚ್ಚಿಕೊಳ್ಳುವುದು ಬಾಲಿಶ. ಆನಂದ್ ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ. ಈ ಜಿಲ್ಲೆಯ ಜನರಿಗೆ ಹೀಗಾಗಬೇಕು, ಹಾಗಾಗಬೇಕು ಎಂದು ಎಷ್ಟು ಮನವಿ ನೀಡಿದ್ದಿರಿ?, ಬೇಕಾಬಿಟ್ಟಿ ಶಬ್ದಗಳಿಂದ ಮಾತನಾಡುವುದು ಪ್ರಜಾಪ್ರಭುತ್ವದ ಸಭ್ಯ ಸಂಸ್ಕೃತಿಯಲ್ಲ. ಜನರನ್ನು ಅವರು ಪ್ರಚೋದಿಸುತ್ತಿದ್ದಾರೆ. ಜಿಲ್ಲೆಯ ಜನತೆ ಇಂತಹ ಹೇಳಿಕೆಗಳಿಗೆ ಬೆಲೆ ನೀಡಬಾರದು. ಇಂತಹ ಉಢಾಪೆ ಮಾತುಗಳನ್ನು ಜನತೆ ನಿರ್ಲಕ್ಷಿಸಬೇಕು. ಮುಂದೆ ಚುನಾವಣೆಯಲ್ಲಿ ಜನತಾ ಪ್ರಭುಗಳೇ ಇವರಿಗೆ ಬುದ್ಧಿ ಕಲಿಸುತ್ತಾರೆ‌ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಾಧ್ಯಮ ಸಹ ವಕ್ತಾರ ಸದಾನಂದ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗೋವಿಂದ ನಾಯ್ಕ, ಎನ್.ಎಸ್.ಹೆಗಡೆ, ಜಿಲ್ಲಾ ವಿಶೇಷ ಆಹ್ವಾನಿತ ಮನೋಜ್ ಭಟ್ ಹಾಜರಿದ್ದರು.

ABOUT THE AUTHOR

...view details