ಕಾರವಾರ: ಹಾಸಿಗೆ ಕೆಳಗೆ ಬಚ್ಚಿಟ್ಟ ತಲ್ವಾರ್ ಅನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಹೊನ್ನಾವರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಎಮ್ಮೆಪೈಲ್ ನಿವಾಸಿ ನಾಗರಾಜ ಎಂಬಾತನ ಮನೆಯಲ್ಲಿ ತಲ್ವಾರ್ ಪತ್ತೆಯಾಗಿದ್ದು, ಸಿಪಿಐ ಮಂಜುನಾಥ ಇ ಒ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿ ಸಮೇತ ಮಾರಕಾಸ್ತ್ರವನ್ನು ವಶಪಡಿಸಿಕೊಂಡಿದ್ದಾರೆ.
ವಿಧಾನಸಭೆ ಚುನಾವಣೆ ಸಮಯದಲ್ಲಿ ಯಾವುದೋ ರಾಜಕೀಯ ಪಕ್ಷಕ್ಕೆ ಬೆಂಬಲ ಸೂಚಿಸಿ ಹೀನಕೃತ್ಯ ಎಸಗುವ ಸಂಚನ್ನು ರೂಪಿಸಿದ್ದ ಎನ್ನುವ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದೆ. ಸರ್ಚ್ ವಾರಂಟ್ ಸಮೇತ ಆರೋಪಿ ಮನೆಗೆ ಎಂಟ್ರಿಕೊಟ್ಟ ಸಿಬ್ಬಂದಿ ಎರಡು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದರು. ಈ ವೇಳೆ, ಮಂಚದ ಮೇಲಿರುವ ಬೆಡ್ ಕೆಳಗೆ 2 ಅಡಿ 6 ಇಂಚು ಉದ್ದದ ಹರಿತವಾಗಿರುವ ಕಬ್ಬಿಣದ ಲಾಂಗ್ ಪತ್ತೆಯಾಗಿದೆ. ಮಾರಕಾಸ್ತ್ರದ ಬಗ್ಗೆ ನಾಗರಾಜ ನಾಯ್ಕ ವಿಚಾರಿಸಿದರೆ ಸಮರ್ಪಕವಾಗಿ ಉತ್ತರಿಸಿಲ್ಲ ಎನ್ನಲಾಗಿದೆ. ಈ ಕುರಿತು ಕಲಂ 25(1)(ಬಿ) (ಬಿ)ಭಾರತೀಯ ಆಯುಧ ಅಧಿನಿಯಮ 1959 ರ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ.
ಸಿಕ್ಕ ಚಿನ್ನ ಮರಳಿಸಿದ ಯುವಕ :ಭಟ್ಕಳದ ಮುರ್ಡೇಶ್ವರ ನಾಡವರ ಕೇರಿ ರಸ್ತೆಯಲ್ಲಿ ಸಿಕ್ಕ ಪರ್ಸ್ನಲ್ಲಿದ್ದ ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನವನ್ನು ಪೊಲೀಸರ ಮುಖಾಂತರ ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಯುವಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ. ಗಣೇಶ ಈಶ್ವರ ನಾಯ್ಕ ಮುರ್ಡೇಶ್ವರದ ನಾಡವರ ಕೇರಿ ರಸ್ತೆಯಲ್ಲಿ ತೆರಳುವಾಗ 12 ಉಂಗುರ ಹಾಗೂ 2 ಜೊತೆ ಕಿವಿ ಓಲೆಗಳು ಇರುವ ಅಂದಾಜು 30 ಗ್ರಾಂ ತೂಕದ ಪರ್ಸ್ ಸಿಕ್ಕಿದೆ. ಈ ವೇಳೆ, ಆಸುಪಾಸಿನಲ್ಲಿ ಯಾರೂ ಕಾಣದಿದ್ದಾಗ ಅದನ್ನು ತೆಗೆದುಕೊಂಡ ಯುವಕ. ನೇರವಾಗಿ ಮುರ್ಡೇಶ್ವರ ಪೊಲೀಸ್ ಠಾಣೆಗೆ ತೆರಳಿ ನೀಡಿದ್ದಾನೆ. ಬಳಿಕ ಪೊಲೀಸರು ಚಿನ್ನ ಕಳೆದುಕೊಂಡ ವಾರಸುದಾರ ಜೋಸೆಫ್ ಡಿಸೋಜಾ ಅವರನ್ನು ಪತ್ತೆ ಹಚ್ಚಿ, ಪೊಲೀಸ್ ಠಾಣೆಗೆ ಕರೆಸಿ ಯುವಕನ ಮೂಲಕ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿ ಬಂಗಾರ ಹಸ್ತಾಂತರಿಸಿದರು. ಈ ವೇಳೆ, ಗಣೇಶ ಈಶ್ವರ ನಾಯ್ಕ ಅವರ ಪ್ರಾಮಾಣಿಕತೆಗೆ ಮುರ್ಡೇಶ್ವರ ಪೊಲೀಸ್ ಠಾಣೆ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.