ಉಡುಪಿ: ಉಡುಪಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ, ಸದ್ಯ ಉಡುಪಿಯ ಬೆಳೆವಣಿಗೆಯೇ ಹಲವಾರು ಸಮಸ್ಯೆಗಳಿಗೆ ಮೂಲವಾದಂತಿದೆ. ಬೆಳೆಯುತ್ತಿರುವ ನಗರಕ್ಕೆ ಕುಡಿಯುವ ನೀರು ಪೂರೈಸಲು ನಗರ ಸಭೆ ಹೆಣಗಾಡುತ್ತಿದೆ.
ನಗರಕ್ಕೆ ನೀರು ಪೂರೈಸುವ ಭರದಲ್ಲಿ ಅನ್ನದಾತರ ನೀರಿನ ಮೂಲಕ್ಕೆ ನಗರಸಭೆ ಕತ್ತರಿ ಹಾಕಿದ್ದು, ಕೃಷಿಗೆ ಸ್ವರ್ಣಾ ನದಿಯ ನೀರು ಬಳಕೆಯನ್ನ ಕಡಿತಗೊಳಿಸಿ ಅನ್ನದಾತನ ಹೊಟ್ಟೆ ಮೇಲೆ ಬರೆ ಎಳೆದಿದೆ. ಫೆ.1 ರಿಂದ ಪಂಪ್ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ರೈತರ ಕೋಪಕ್ಕೆ ಕಾರಣವಾಗಿದೆ.
ಈ ನಿರ್ಧಾರದಿಂದ ಅನಾದಿ ಕಾಲದಿಂದಲೂ ಉಡುಪಿ ಜಿಲ್ಲೆಯ ಹಿರಿಯಡ್ಕದ ಸ್ವರ್ಣಾ ನದಿ ತೀರದಲ್ಲಿ ಕೃಷಿ ಮಾಡಿಕೊಂಡಿರುವ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ 22 ದಿನಗಳಿಂದ ಬೆಳೆಗಳು ನೀರಿಲ್ಲದೆ ನಾಶವಾಗುತ್ತಿದ್ದು, ರೈತರು ಆತಂಕಕ್ಕೆ ಸಿಲುಕಿದ್ದಾರೆ.
ಮಾರ್ಚ್, ಎಪ್ರಿಲ್ ತಿಂಗಳಲ್ಲಿ ವಾರಕ್ಕೆ ಎರಡು ಬಾರಿ ಮತ್ತು ಮೇ ತಿಂಗಳಲ್ಲಿ ವಾರಕ್ಕೆ ಒಂದು ಬಾರಿಯಂತೆ ನದಿ ತೀರದ ಕೃಷಿಕರಿಗೆ ನೀರು ಹರಿಸಲು ಜಿಲ್ಲಾಡಳಿತ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಮುಂದೆ ಸಂಭವಿಸುವ ಅನಾಹುತಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿ ಜಿಲ್ಲಾ ಕೃಷಿಕ ಸಂಘದ ನೇತೃತ್ವದಲ್ಲಿ ರೈತರು ಉಡುಪಿ ನಗರಕ್ಕೆ ನೀರು ಸರಬರಾಜು ಮಾಡುವ ಬಜೆ ಅಣೆಕಟ್ಟೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಅನ್ನದಾತರ ನೀರಿನ ಮೂಲಕ್ಕೆ ನಗರಸಭೆ ಕತ್ತರಿ ವಾರದಲ್ಲಿ ಎರಡು ದಿನ ನೀರು ನೀಡುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕರಾವಳಿಯಲ್ಲಿ ಅಳಿವಿನಂಚಿನಲ್ಲಿರುವ ಕೃಷಿಯನ್ನು ಉಳಿಸುವ ನಿಟ್ಟಿನಲ್ಲಿ ರೈತರಿಗೆ ಸವಲತ್ತುಗಳನ್ನು ನೀಡಬೇಕೆ ಹೊರತು ಅವರ ನೀರಿನ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡಬಾರದು. ನೀರಿಗಾಗಿ ರೈತರು ಉಗ್ರ ಹೋರಾಟ ನಡೆಸಲು ಅಧಿಕಾರಿಗಳು ಅವಕಾಶ ಮಾಡಿಕೊಡಬಾರದು ಎಂದು ಎಚ್ಚರಿಕೆ ನೀಡಿದರು.
ಅನ್ನದಾತರ ನೀರಿನ ಮೂಲಕ್ಕೆ ನಗರಸಭೆ ಕತ್ತರಿ ನದಿ ನೀರನ್ನು ಹಂಚಿ ಉಪಯೋಗಿಸುತ್ತೇವೆ ಎಂದು ರೈತರೆಲ್ಲಾ ನಿರ್ಧರಿಸಿವೆ. ಇದಕ್ಕೆ ವಿರುದ್ಧವಾಗಿ ಯಾವುದೇ ಅಧಿಕಾರಿ ನಮ್ಮ ಕೃಷಿ ಭೂಮಿಗೆ ಕಾಲಿಟ್ಟರೆ ರೈತರೆಲ್ಲ ಒಗ್ಗಟ್ಟಾಗಿ ಅವರನ್ನು ಹಿಮ್ಮೆಟ್ಟಿಸುವ ಕೆಲಸ ಮಾಡುತ್ತೇವೆ. ಫೆ.1 ರಿಂದ ಕಡಿತ ಮಾಡಿರುವ ವಿದ್ಯುತ್ ಸಂಪರ್ಕವನ್ನು ವಾಪಸ್ ನೀಡದಿದ್ದರೆ ಮೆಸ್ಕಾಂ ವಿರುದ್ಧ ಹೋರಾಟ ನಡೆಸುವುದರ ಜೊತೆಗೆ ರೈತರು ನೀರೆತ್ತುವ ಕೆಲಸ ಮಾಡುವಾಗ ಯಾವುದೇ ರೀತಿಯ ವಿದ್ಯುತ್ ಅನಾಹುತ ಸಂಭವಿಸಿದ್ದಲ್ಲಿ ಅದಕ್ಕೆ ಮೆಸ್ಕಾಂ ಹೊಣೆ ಹೊರಬೇಕು ಎಂದು ಹೇಳಿದ್ದಾರೆ.
ಸದ್ಯ ಹಿರಿಯಡ್ಕ ಸ್ವರ್ಣ ನದಿ ತೀರ ಪ್ರದೇಶದಲ್ಲಿ 950 ಮಂದಿ ಕೃಷಿಕರು ಹಾಗೂ 450 ಮಂದಿ ಕೃಷಿ ಕಾರ್ಮಿಕರು ಸುಮಾರು 650 ಎಕರೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದಾರೆ. 300 ಎಕರೆ ತೆಂಗು,120 ಎಕರೆ ಅಡಿಕೆ, 50 ಎಕರೆ ಬಾಳೆ, 10 ಎಕರೆ ತರಕಾರಿ, 200 ಎಕರೆ ಭತ್ತ ಬೆಳೆಯುತ್ತಿದ್ದಾರೆ. ಇನ್ನು ಕಡು ಬೇಸಿಗೆಯಲ್ಲಿ ಭೂ ತೇವಾಂಶ ಕಾಯ್ದುಕೊಳ್ಳುವಷ್ಟು ನೀರು ಹರಿಸದಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದು ಕೃಷಿಕರ ವಾದವಾಗಿದೆ.
ಸದ್ಯ ಈ ವಿಚಾರವಾಗಿ ನಗರಸಭೆಯ ಆಯುಕ್ತರು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಇದುವರೆಗೆ ಮನವಿ ನೀಡಿ ಬೇಸತ್ತಿರುವ ರೈತರಿಗೆ ಮಾತ್ರ ಆಡಳಿತ ವ್ಯವಸ್ಥೆಯ ಮೇಲೆ ನಂಬಿಕೆ ಇದ್ದಂತೆ ಕಾಣುತ್ತಿಲ್ಲ.