ಉಡುಪಿ: ರಾಜ್ಯದಲ್ಲಿ ಅಸಮರ್ಪಕ ಆಕ್ಸಿಜನ್ ನಿರ್ವಹಣೆಯಿಂದ ಕೆಲವೆಡೆ ಸಮಸ್ಯೆ ಆಗಿದೆ. ಜಿಲ್ಲೆಗೆ ಸಮರ್ಪಕ ಆಕ್ಸಿಜನ್ ಪೂರೈಕೆ ಆಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸರ್ಕಾರ ಚಾಮರಾಜನಗರ ಘಟನೆ ನಂತರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಪರಸ್ಪರ ಜಿಲ್ಲೆಯ ಜೊತೆ ಹೊಂದಾಣಿಕೆ ಮಾಡಲಾಗುತ್ತಿದೆ. ಎಲ್ಲ ಸಂಸದರು ದೆಹಲಿಯ ಜೊತೆ ಸಂಪರ್ಕದಲ್ಲಿದ್ದೇವೆ. ಸಾಮರ್ಥ್ಯ ಮೀರಿ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ಆಕ್ಸಿಜನ್ ಉತ್ಪಾದನೆ ಹೆಚ್ಚಳ ಮಾಡುವುದೊಂದೇ ಸದ್ಯಕ್ಕಿರುವ ಪರಿಹಾರ ಎಂದರು.
ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ. ಪಿಎಂ ಕೇರ್ ಮೂಲಕ ಪ್ರತಿ ತಾಲೂಕಿನಲ್ಲೂ ಆಕ್ಸಿಜನ್ ಉತ್ಪಾದನೆಗೆ ಹಣಕಾಸು ನೆರವು ನೀಡುತ್ತಿದೆ. ತಾಲೂಕು ಆಸ್ಪತ್ರೆಯಲ್ಲಿ ಆಕ್ಷಿಜನ್ ಉತ್ಪಾದನೆಗೆ ಒತ್ತು ನೀಡಲಾಗಿದೆ. ಮೂರನೇ ಅಲೆ ಇದಕ್ಕಿಂತ ಕೆಟ್ಟದಾಗಿರುತ್ತೆ ಎಂಬುದನ್ನು ಅರಿತಿದ್ದೇವೆ. ಹೀಗಾಗಿ ನಾಲ್ಕು ಪಟ್ಟು ಹೆಚ್ಚು ರೋಗಿಗಳನ್ನು ನಿಭಾಯಿಸಲು ಕ್ರಮ ರೂಪಿಸುತ್ತೇವೆ ಎಂದು ತಿಳಿಸಿದರು.