ತುಮಕೂರು:ಕೇಂದ್ರ ಗೃಹ ಸಚಿವಅಮಿತ್ ಶಾ ಈಗಾಗಲೇ ಸಿಎಂ ನೇತೃತ್ವದಲ್ಲಿ ಚುನಾವಣೆ ಎಂದು ಹೇಳಿದ್ದಾರೆ. ಕೇವಲ ಮುಖ್ಯಮಂತ್ರಿ ಮಾತ್ರವಲ್ಲ, ಇಡೀ ಟೀಂ ಮತ್ತು ಪಕ್ಷದ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ, ಈ ಬಾರಿ 130 ಸೀಟುಗಳನ್ನ ಗೆದ್ದು ಸ್ಪಷ್ಟ ಬಹುಮತ ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ನಮಸ್ಕಾರ ಮಾಡಿ, ಆಶೀರ್ವಾದ ಪಡೆದಿದ್ದೇನೆ. ದಾಸೋಹದ ದಿನ ಇಡೀ ರಾಜ್ಯದಲ್ಲಿ ಆಚರಣೆ ಆಗುತ್ತೆ. ವಿಭಿನ್ನ, ವಿಶೇಷವಾಗಿ ಆಚರಿಸೋ ಬಗ್ಗೆ ಚರ್ಚೆ ಮಾಡಲಾಗುತ್ತೆ ಎಂದರು. ಫೆಬ್ರವರಿ ತಿಂಗಳಲ್ಲಿ ಅಧಿಕೃತವಾಗಿ ಸರ್ಕಾರದಿಂದ ಆಚರಣೆ ಮಾಡುತ್ತೇವೆ. ಈ ವೇಳೆ ಸಾರ್ವತ್ರಿಕ ರಜೆ ಇರೋದಿಲ್ಲಾ ಎಂದು ಸ್ಪಷ್ಟಪಡಿಸಿದರು.
ಶಿವಕುಮಾರ ಶ್ರೀಗಳ ಹುಟ್ಟೂರಲ್ಲಿ ಪುತ್ಥಳಿ ನಿರ್ಮಾಣ ಕಾಮಗಾರಿ ಸ್ಥಗಿತ ವಿಚಾರ ಕುರಿತು ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಮೊನ್ನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಶೀಘ್ರದಲ್ಲಿ ಕಾಮಗಾರಿಯನ್ನು ಮತ್ತೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಸಾಮಾಜಿಕ ಕ್ರಾಂತಿಯನ್ನುಂಟು ಮಾಡುವ ಕಾಯಕದಲ್ಲಿ ಮಠಗಳು ಮುಂಚೂಣಿಯಲ್ಲಿರಬೇಕು:ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 4 ನೇ ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಬೊಮ್ಮಾಯಿ, ಬಸವಣ್ಣನವರ ತತ್ವಾದರ್ಶಗಳ ಬಗ್ಗೆ ಚಿಂತನೆ ಅತ್ಯಗತ್ಯವಾಗಿದ್ದು, ಅಸಮಾನತೆ, ಲಿಂಗಭೇದ, ಮೇಲುಕೀಳುಗಳನ್ನು ಹೋಗಲಾಡಿಸಲು ನಾವೇನು ಮಾಡಬೇಕು ಎಂಬ ಬಗ್ಗೆ ಚಿಂತಿಸಬೇಕು. ಸಾಮಾಜಿಕ ಕ್ರಾಂತಿಯನ್ನುಂಟು ಮಾಡುವ ಕಾಯಕದಲ್ಲಿ ಮಠಗಳು ಮುಂಚೂಣಿಯಲ್ಲಿರಬೇಕು ಎಂದು ತಿಳಿಸಿದರು.
ಬದುಕಿನಲ್ಲಿ ಮುಗ್ಧತೆಯನ್ನು ಸದಾ ಕಾಯ್ದುಕೊಂಡು ಆತ್ಮಸಾಕ್ಷಿಯಿಂದ ನಡೆದುಕೊಳ್ಳುವುದು ಬಹಳ ಕಷ್ಟ. ಸತ್ಯವೆಂಬ ಸಾತ್ವಿಕ ವಿಚಾರವನ್ನಿಟ್ಟುಕೊಂಡು, ಲೌಕಿಕ ಲಾಭ ನಷ್ಟಗಳಿಂದ ದೂರವಿರುವವರು ಮಾತ್ರ ಆತ್ಮಸಾಕ್ಷಿಯಿಂದ ನಡೆದುಕೊಳ್ಳಲು ಸಾಧ್ಯ. ತಮ್ಮ ಬದುಕಿನುದ್ದಕ್ಕೂ ಮುಗ್ಧತೆ ಹಾಗೂ ಆತ್ಮಸಾಕ್ಷಿಯಂತೆ ನಡೆದುಕೊಂಡವರೇ ನಮ್ಮ ನಡೆದಾಡುವ ದೇವರಾದ ಶಿವಕುಮಾರ ಸ್ವಾಮೀಜಿಗಳು. ಪ್ರತಿನಿತ್ಯ ಪರೀಕ್ಷೆಗೆ ಒಳಪಟ್ಟು ಆತ್ಮಬಲ ಹೆಚ್ಚುವುದರಿಂದ ಪ್ರಕಾಶಮಯವಾದ ಆತ್ಮಬಲ ದೊರೆಯುತ್ತದೆ ಎಂದರು.