ತುಮಕೂರು:ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ಅಮಾನವೀಯತೆ ಘಟನೆಯೊಂದು ಬೆಳಕಿಗೆ ಬಂದಿದೆ. ಅನಾಥ ಬಾಲಕಿಯ ತೊಡೆಗಳನ್ನು ಸುಡುವ ಮೂಲಕ ಸಾಕು ತಾಯಿವೋರ್ವಳು ಬಾಲಕಿಯ ಮೇಲೆ ಕ್ರೌರ್ಯ ಮೆರೆದಿರುವ ಆರೋಪ ಕೇಳಿ ಬಂದಿದೆ.
ಕುಣಿಗಲ್ ಬಸ್ ನಿಲ್ದಾಣದದಲ್ಲಿ 10 ವರ್ಷಗಳ ಹಿಂದೆ ಸಿಕ್ಕಂತಹ ಹೆಣ್ಣು ಮಗುವನ್ನು ತಂದು ಸಾಕಿದ್ದ ರತ್ನಮ್ಮ ಎಂಬಾಕೆ ಬಾಲಕಿಯ ತೊಡೆಯನ್ನೇ ಸುಟ್ಟು ಹಾಕಿ ವಿಕೃತಿ ಮೆರೆದಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಅನಾಥ ಬಾಲಕಿ ಮೇಲೆ ಸಾಕು ತಾಯಿಯಿಂದ ಹಲ್ಲೆ ಕುಣಿಗಲ್ ಪಟ್ಟಣದ ಮಹಾವೀರ ನಗರದಲ್ಲಿ ವಾಸವಾಗಿರೋ ಈಕೆ ಸಾಕು ಮಗಳ ಮೇಲೆ ದೌರ್ಜನ್ಯ ಎಸಗಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಕುಣಿಗಲ್ ನ ಆಕೆಯ ಮನೆಯಲ್ಲಿ ಜನವರಿ 17 ರಂದು ಘಟನೆ ನಡೆದಿದ್ದು, ಬಾಲಕಿಯು ಮನೆ ಕೆಲಸ ಮಾಡದಿದ್ದಕ್ಕೆ ಬಾಲಕಿಯ ತೊಡೆಯನ್ನು ಸುಟ್ಟು ಹಾಕಿದ್ದಾಳೆ. ಪಟ್ಟಣದ ಶಾಲೆಯೊಂದರಲ್ಲಿ 6 ನೇ ತರಗತಿ ಓದುತ್ತಿರುವ ಈ ಬಾಲಕಿ ತನ್ನ ಸ್ನೇಹಿತರ ಸಹಾಯದಿಂದ ಶಾಲೆಯ ಶಿಕ್ಷಕರ ಗಮನಕ್ಕೆ ಈ ವಿಷಯವನ್ನು ತಂದಿದ್ದಾಳೆ. ತಕ್ಷಣ ಶಿಕ್ಷಕ ರಾಜಣ್ಣ ಎಂಬುವರು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ಕೊಡಿಸಿ, ಮಕ್ಕಳ ಹಕ್ಕು ರಕ್ಷಣಾ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಮಕ್ಕಳ ಹಕ್ಕು ರಕ್ಷಣಾ ಅಧಿಕಾರಿಗಳು ಬಾಲಕಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. ನಂತರ ಸಂತ್ರಸ್ತ ಬಾಲಕಿಯನ್ನು ಬಾಲಮಂದಿರಕ್ಕೆ ದಾಖಲಿಸಿದ್ದಾರೆ. ಈ ಪ್ರಕರಣದ ಸಂಬಂಧ ಆರೋಪಿ ಸಾಕುತಾಯಿ ರತ್ನಮ್ಮಳನ್ನು ಕುಣಿಗಲ್ ಪೊಲೀಸರ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.