ಶಿವಮೊಗ್ಗ :ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮಗ ವಿಜಯೇಂದ್ರರನ್ನು ಕನಿಷ್ಟ 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತದಾರರಲ್ಲಿ ಮನವಿ ಮಾಡಿದ್ದಾರೆ. ಇಂದು ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಯಡಿಯೂರಪ್ಪ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಕೆ ಬಳಿಕ ನಡೆದ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಬಿಎಸ್ವೈ, ಭವ್ಯ ಭಾರತದ ಸರ್ವಾಂಗೀಣ ಅಭಿವೃದ್ದಿಗಾಗಿ ಮೋದಿ, ಶಾ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಬಿಜೆಪಿ 130 ಸ್ಥಾನ ಗಳಿಸುವುದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ನನಗೆ 7 ಬಾರಿ ಸ್ಪರ್ಧಿಸಲು ಅವಕಾಶ ನೀಡಿ ಗೆಲ್ಲಿಸಿದ್ದೀರಿ. ನಾನು ಉಚಿತ ಸೈಕಲ್, ರೈತರಿಗೆ ಉಚಿತ ವಿದ್ಯುತ್ ನೀಡಿದ್ದೇನೆ. ದಯಮಾಡಿ ಇಲ್ಲಿ ಸೇರಿರುವವರು ನಿಮ್ಮ ಕುಟುಂಬದ ಮತದ ಜೊತೆಗೆ ಇತರರಿಂದ ಐದು ಮತ ಹಾಕಿಸಿದರೆ ವಿಜಯೇಂದ್ರ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ನಿಮ್ಮ ಬೂತ್‌ನಲ್ಲಿ ಶೇ 70ರಷ್ಟು ಮತ ಕೊಡಿಸಬೇಕು. ಕಾರ್ಯಕರ್ತರು ವಿಶ್ವಾಸದಿಂದ ಕೆಲಸ ಮಾಡಬೇಕೆಂದು ವಿನಂತಿಸಿಕೊಂಡರು.
ಶಿಕಾರಿಪುರದ ಅಭಿವೃದ್ದಿಗೆ ಗೆಲ್ಲಿಸಿ: ಸಮಾವೇಶದಲ್ಲಿ ಮಾತನಾಡಿದ ಬಿ.ವೈ ವಿಜಯೇಂದ್ರ, ಯಡಿಯೂರಪ್ಪನವರಿಗೆ ರಾಜಕೀಯ ಜನ್ಮ, ರಾಜಕೀಯ ಶಕ್ತಿ ನೀಡಿದ ತಾಲೂಕು ಶಿಕಾರಿಪುರ. ತಾಲೂಕಿನ ಜನ ಯಡಿಯೂರಪ್ಪರಿಗೆ ಆಶೀರ್ವಾದ ಮಾಡಿದ್ದಾರೆ. ರಾಜ್ಯವಷ್ಟೇ ಅಲ್ಲದೆ, ದೇಶದಲ್ಲಿ ಗುರುತಿಸುವ ರೀತಿಯಲ್ಲಿ ತಾಲೂಕನ್ನು ಅಭಿವೃದ್ದಿ ಮಾಡಿದ್ದಾರೆ. ಅಲ್ಪಸಂಖ್ಯಾತರು ಒಂದೇ ತಾಯಿ ಮಕ್ಕಳಂತೆ ಬದುಕುವಂತೆ ಯಡಿಯೂರಪ್ಪ ಮಾಡಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪನವರು ಚುನಾವಣೆಯಿಂದ ಹಿಂದೆ ಸರಿದಿದ್ದರಿಂದ ನಮ್ಮ ಪಕ್ಷದ ಹಿರಿಯರು ಭೇಟಿ ಮಾಡಿ ತಾಲೂಕು ಅಭಿವೃದ್ದಿ ಮಾಡಿದ್ದೀರಿ. ಕಟ್ಟಕಡೆಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂದು ಒತ್ತಾಯ ಮಾಡಿದಾಗ ಯಡಿಯೂರಪ್ಪ ನಿರಾಕರಿಸಿದರು. ನಂತರ ಕಾರ್ಯಕರ್ತರು ನನ್ನ ಹೆಸರನ್ನು ಸೂಚಿಸಿದರು. ಇದರಿಂದಾಗಿ ನಮ್ಮ ಪಕ್ಷದ ವರಿಷ್ಠರು ಸ್ಪರ್ಧೆಗೆ ಅವಕಾಶ ನೀಡಿದ್ದಾರೆ. ಯಡಿಯೂರಪ್ಪನವರಂತೆ ನನ್ನ ರಾಜಕೀಯ ಜನ್ಮಕ್ಕೆ ಶಿಕಾರಿಪುರ ಅವಕಾಶ ಮಾಡಿಕೊಟ್ಟಿದ್ದು ನಮ್ಮ ಪುಣ್ಯ. ನನ್ನ ತಂದೆಯ ಆಡಳಿತವನ್ನು ಹತ್ತಿರದಿಂದ ನೋಡಿದ್ದೇನೆ. ನಾನು ನಮ್ಮ ತಂದೆಯಂತೆ ರೈತರ ಪರ ಧ್ವನಿಯಾಗುತ್ತೇನೆ. ಜನರ ಪರವಾಗಿ ಪ್ರಾಮಾಣಿಕವಾದ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ನೀರಾವರಿ ಯೋಜನೆ ತಾಲೂಕಿನಲ್ಲಿ ಜಾರಿಯಾಗಿದೆ. ಮಳೆ ಸಕಾಲದಲ್ಲಿ ಮಳೆ ಸುರಿಯಬೇಕೆಂದು ಭಗವಂತನಲ್ಲಿ ಬೇಡಿಕೊಳ್ಳುತ್ತೇನೆ. ಇನ್ನಷ್ಟು ವಿದ್ಯುತ್ ಪ್ರಸರಣ ಕೇಂದ್ರಗಳ ಸ್ಥಾಪನೆ ಆಗಬೇಕಿದೆ. ಯುವಕರಿಗೆ ಕೆಲಸ ಸಿಗಬೇಕಿದೆ. ಸಂಡದಲ್ಲಿ ನೂರು ಎಕರೆಯಲ್ಲಿ ಕೈಗಾರಿಕೆಯನ್ನು ಸ್ಥಾಪನೆ ಮಾಡಲು ಪ್ರಯತ್ನ ನಡೆಯುತ್ತಿದೆ. ವಿಮಾನ ನಿಲ್ದಾಣ ನಾವುಗಳು ಓಡಾಡಲು ಮಾತ್ರವೇ ಅಲ್ಲ, ಬದಲಿಗೆ ಕೈಗಾರಿಕೋದ್ಯಮಿಗಳು ಇಲ್ಲಿಗೆ ಬಂದು ದುಡಿಯುವ ಕೈಗಳಿಗೆ ಕೆಲಸ ನೀಡಬೇಕೆಂದು ವಿಮಾನ ನಿಲ್ದಾಣ ಸ್ಥಾಪನೆ ಮಾಡಲಾಗಿದೆ ಎಂದರು.
ನಾನು ಕಳೆದ ಎರಡು ತಿಂಗಳುಗಳಿಂದ ಪ್ರವಾಸ ಮಾಡುತ್ತಿದ್ದೇನೆ. ಯಡಿಯೂರಪ್ಪನವರಿಗೆ 70ರ ದಶಕದಲ್ಲಿ ತೋರಿದ ಪ್ರೀತಿಯನ್ನು ನನಗೂ ತೋರುತ್ತಿದ್ದೀರಿ. ನಿಮ್ಮ ಆಶೀರ್ವಾದವನ್ನು ನಾನು ಎಂದಿಗೂ ಮರೆಯಲ್ಲ. ಕಮಲದ ಗುರುತಿಗೆ ಮತ ನೀಡಿ, ಬಹು ದೊಡ್ಡ ಅಂತರದಲ್ಲಿ ಗೆಲ್ಲಿಸಬೇಕೆಂದು ವಿನಂತಿಸಿಕೊಂಡರು. ಸಮಾವೇಶದಲ್ಲಿ ಕೇಂದ್ರ ಸಚಿವ ನಾರಾಯಣ ಸ್ವಾಮಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದರಾದ ಉಮೇಶ್ ಚೌಹಾಣ್, ಬಿ.ವೈ.ವಿಜಯೇಂದ್ರ, ಶಾಸಕರಾದ ಹಾಲಪ್ಪ, ರುದ್ರೇ ಗೌಡ, ನಟಿ ಶೃತಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ :ಚುನಾವಣೆ ಮುನ್ನ ದೊಡ್ಡ ಸದ್ದು ಮಾಡಿದ್ದ ಮೇಕೆದಾಟು, ಚುನಾವಣೆ ಬರ್ತಿದ್ದಂತೆ ಮರೆತೋಯ್ತೇ?