ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸ್ಥಾನಕ್ಕೆ ಶೀತಲ ಸಮರ ನಡೆಯುತ್ತಿದೆ. ಇದೇ ಖುರ್ಚಿಗಾಗಿ ಮುಂದೆ ಭೀಕರ ಯುದ್ಧ ನಡೆಯುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಶಿವಮೊಗ್ಗದಲ್ಲಿ ಭವಿಷ್ಯ ನುಡಿದಿದ್ದಾರೆ. ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕುರುಕ್ಷೇತ್ರದಲ್ಲಿ ಪಾಂಡವರು, ಕೌರವರ ನಡುವೆ ಯುದ್ಧ ನಡೆಯಿತು. ಆದರೆ ,ಸಿಎಂ ಸ್ಥಾನಕ್ಕಾಗಿ ಕೌರವರ ನಡುವೆಯೇ ಯುದ್ಧ ನಡೆಯುತ್ತದೆ. ಅದು ಮುಂದೆ ಭೀಕರ ಯುದ್ಧವಾಗಲಿದೆ ಎಂದರು.
ಮಾಜಿ ಸಚಿವ ವಿಶ್ವನಾಥ್ ಅವರು ಹಿಂದೆ ಬಿಜೆಪಿ ಸೇರ್ಪಡೆಯಾದವರಿಗೆ ಕೋಟಿ ಕೋಟಿ ಹಣ ನೀಡಿದ್ದರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಅವರಿಗೆ ಎಲ್ಲ ಗೊತ್ತಿರುವ ವಿಚಾರವಾಗಿದೆ. ಅವರು ಪುಸ್ತಕ ಬರೆಯಲಿ, ನಾನು ಯಾರಿಗೂ ಒಂದು ರೂಪಾಯಿ ಕೊಟ್ಟಿರುವ ಉದಾಹರಣೆ ಇಲ್ಲ ಎಂದರು.
ಆಪರೇಷನ್ ಕಮಲ ಬಗ್ಗೆ ನನಗೆ ಮಾಹಿತಿ ಇಲ್ಲ:ರಾಜ್ಯದಲ್ಲಿ ಆಪರೇಷನ್ ಕಮಲ ನಡೆಸುತ್ತಿರುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಮುಖ್ಯಮಂತ್ರಿ ಖುರ್ಚಿಗೆ ಅವರವರೇ ಹೊಡೆದಾಡಿಕೊಳ್ಳುತ್ತಿದ್ದಾರೆ. ರಾಜ್ಯದ ಜನ ನಗುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಭರವಸೆ ನೀಡಿದ್ದರು. ಭರವಸೆ ಹುಸಿಯಾಗುತ್ತಿದೆ ಎಂದರು.
ಬಿಜೆಪಿ ಬರಗಾಲ ಅಧ್ಯಯನ ಪ್ರವಾಸ:ಬಿಜೆಪಿ ಬರಗಾಲ ಪ್ರವಾಸ ಆರಂಭವಾದ ಮೇಲೆ ಸರ್ಕಾರ 350 ಕೋಟಿ ಬಿಡುಗಡೆ ಮಾಡಿದೆ. ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಪಕ್ಷವಾಗಿ ರೈತರ ನಡುವೆ ಹೋಗಿ ನಾವು ಕೂಡಾ ಅಧ್ಯಯನ ಮಾಡುತ್ತೇವೆ. ದಿನನಿತ್ಯ ಸುಳ್ಳು ಹೇಳಿಕೊಂಡು ಪ್ರಧಾನಮಂತ್ರಿ ಅವರನ್ನು ಟೀಕೆ ಮಾಡೋದು ಸರಿಯಲ್ಲ. ಈ ರೀತಿ ಮಾಡಿದರೆ ಕಾಂಗ್ರೆಸ್ಗೆ ಏನು ಅನ್ಯಾಯ ಆಗಲ್ಲ. ರಾಜ್ಯದ ಜನರಿಗೆ ಅನ್ಯಾಯ ಆಗುತ್ತದೆ ಎಂದರು.
ಲೋಕಸಭೆ ಚುನಾವಣೆ ಭರ್ಜರಿ ಗೆಲುವು: ಮುಂದೆ ಲೋಕಸಭೆ ಚುನಾವಣೆ ಬರುತ್ತದೆ. ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿ ಆಗಬೇಕು ಎಂಬ ಕೂಗು ಕೇಳಿ ಬರುತ್ತಿದೆ. ನಮಗೆ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಿರಬಹುದು. ಲೋಕಸಭೆಯಲ್ಲಿ ಅತೀ ಹೆಚ್ಚು ಸ್ಥಾನ ಪಡೆಯುತ್ತೇವೆ ಎಂದರು.
ವಿಐಎಸ್ಎಲ್ ಕಾರ್ಖಾನೆ ಉಳಿಸಬೇಕಿದೆ: ನಾಲ್ವಡಿ ಕೃಷ್ಣರಾಜ ಒಡೆಯರ್ ಕನಸಿನ ಕೂಸು ವಿಐಎಸ್ಎಲ್ ಕಾರ್ಖಾನೆ. ಮಲೆನಾಡಿನ ಹೆಮ್ಮೆ ವಿಐಎಸ್ಎಲ್ ಆಗಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾಕಷ್ಟು ಶಕ್ತಿ ಕೊಟ್ಟರು. ಸಂಸದ ರಾಘವೇಂದ್ರ ಅವರ ಶ್ರಮ ಯಾರು ಮರೆಯಲು ಸಾಧ್ಯವಿಲ್ಲ. ಈ ಕಾರ್ಖಾನೆ ಕೇವಲ ಮಲೆನಾಡು ಅಷ್ಟೇ ಅಲ್ಲ ರಾಜ್ಯದ ಹೆಮ್ಮೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಆಸ್ತಿಯನ್ನು ಉಳಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ:ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇದೆ, ನಮ್ಮನೆ ವಿಚಾರವನ್ನು ನಾವು ಬಗೆಹರಿಸಿಕೊಳ್ಳುತ್ತೇವೆ: ಸಚಿವ ಮಧು ಬಂಗಾರಪ್ಪ