ಶಿವಮೊಗ್ಗ: ರಾಜ್ಯದ ಮೈತ್ರಿ ಸರ್ಕಾರದ ಮೇಲೆ ಕಾಂಗ್ರೆಸ್-ಜೆಡಿಎಸ್ ಶಾಸಕರುಗಳಿಗೆ ಅಸಮಾಧಾನವಿದೆ. ಇದರಿಂದಾಗಿಯೇ ವಿಜಯನಗರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜೀನಾಮೆ ಸಲ್ಲಿಸಿದ್ದಾರೆ. ಶಾಸಕರ ರಾಜೀನಾಮೆ ಪರ್ವ ಆನಂದ್ ಸಿಂಗ್ ಅವರಿಂದ ಪ್ರಾರಂಭವಾಗಿದೆ ಎಂದು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಾಸಕರ ರಾಜೀನಾಮೆ ಪರ್ವ ಆನಂದ್ ಸಿಂಗ್ ರಿಂದ ಪ್ರಾರಂಭವಾಗಿದೆ: ಕೆ.ಎಸ್. ಈಶ್ವರಪ್ಪ - kannadanews
ಮೈತ್ರಿ ಸರ್ಕಾರದ ಮೇಲೆ ಕಾಂಗ್ರೆಸ್-ಜೆಡಿಎಸ್ ಶಾಸಕರುಗಳಿಗೆ ಅಸಮಾಧಾನವಿದೆ. ಹೀಗಾಗಿ ವಿಜಯನಗರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ 3367 ಎಕರೆ ಭೂಮಿಯನ್ನು ಜಿಂದಾಲ್ ಗೆ ಪರಭಾರೆ ಮಾಡುವುದನ್ನು ಆನಂದ್ ಸಿಂಗ್ ವಿರೋಧಿಸಿದ್ದರು. ಈ ಅಸಮಾಧಾನದಿಂದಲೇ ಅವರು ರಾಜೀನಾಮೆ ಸಲ್ಲಿಸಿರಬಹುದು ಎಂದರು. ಇದೇ ರೀತಿ ಕಾಂಗ್ರೆಸ್ ಹಾಗೂ ಜೆಡಿಎಸ್ನಲ್ಲಿ ಸಾಕಷ್ಟು ಜನ ಸ್ವಾಭಿಮಾನಿ ಶಾಸಕರುಗಳಿದ್ದಾರೆ. ಅವರು ಮುಂದೆ ರಾಜೀನಾಮೆ ನೀಡಬಹುದು. ನಾವಂತೂ ಯಾವುದೇ ಆಪರೇಷನ್ ಕಮಲ ಮಾಡಿಲ್ಲ. ಕಾಂಗ್ರೆಸ್ ನ ನಾಯಕರು ಬಿಜೆಪಿ ಮೇಲೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಇತ್ತೀಚೆಗೆ ಬಳ್ಳಾರಿಯಲ್ಲಿ ರಾಜಕೀಯ ಪರ್ವ ಪ್ರಾರಂಭವಾಗುತ್ತದೆ ಎಂದು ಹೇಳಿದ್ದೆ. ಅದೀಗ ಶುರುವಾಗಿದೆ ಎಂದು ಈಶ್ವರಪ್ಪ ಹೇಳಿದರು.
ಜೆಡಿಎಸ್ ವರಿಷ್ಠ ದೇವೇಗೌಡರು ನನ್ನ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದ್ದಾರೆ. ನಾನಂತೂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಹಾಗೂ ವಿದೇಶ ಪ್ರವಾಸ ಎರಡನ್ನೂ ಸಹ ಟೀಕಿಸಿಲ್ಲ. ವಿದೇಶಗಳಲ್ಲಿ ಹಿಂದೂ ದೇವಾಲಯಗಳ ಸ್ಥಾಪನೆಗೆ ಹೋಗುತ್ತಾರೆ ಅಂದ್ರೆ, ನನಗಿಂತ ಸಂತೋಷ ಪಡುವವರು ಯಾರು ಇಲ್ಲ. ಅಮೆರಿಕ ಏಕೆ ಎಲ್ಲಾ ವಿದೇಶಗಳಿಗೂ ಹೋಗಿ ದೇವಾಲಯಗಳ ಉದ್ಘಾಟನೆ ಮಾಡಿ ಬರಲಿ. ರಾಜ್ಯದಲ್ಲಿ ಬರ, ಕುಡಿಯುವ ನೀರಿನ ಸಮಸ್ಯೆ ರಾಜಕೀಯ ಅಸ್ಥಿರತೆ ಇದ್ದಾಗ ವಿದೇಶಿ ಪ್ರವಾಸ ಬೇಕಿತ್ತಾ ಎಂಬುದು ನಮ್ಮ ಪ್ರಶ್ನೆ ಅಷ್ಟೆ ಎಂದರು.