ಶಿವಮೊಗ್ಗ: ನಾನು ಸಿಎಂ ಆಗಬೇಕು ಎಂದು ಸತೀಶ್ ಜಾರಕಿಹೊಳಿ ಅವರು ಎಲ್ಲೂ ಮಾತನಾಡಿಲ್ಲ. ಅವರ ಅಭಿಮಾನಿಯಾಗಿರುವ ಶಾಸಕರೊಬ್ಬರು ಆ ರೀತಿ ಮಾತನಾಡಿದ್ದಾರೆ. ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಒಂದಿಬ್ಬರು ಶಾಸಕರು ಹೇಳಿದಾಕ್ಷಣ ಬದಲಾವಣೆ ಆಗಲ್ಲ. ಅದು ಶಾಸಕಾಂಗ ಸಭೆಯಲ್ಲಿ ತೀರ್ಮಾನವಾಗಬೇಕಿದೆ. ಒಬ್ಬ ಶಾಸಕರು ಹೇಳಿದಾಕ್ಷಣ ಅದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಈ ವಿಚಾರವನ್ನು ಬಿಟ್ಟು ಬಿಡಿ ಎಂದರು.
ಹೊಡೆತ ಬಿದ್ದ ಮೇಲೆ ಹೊಸ ಶಾಸಕರು ಸುಧಾರಿಸುತ್ತಾರೆ: ಈ ರೀತಿ ಹೇಳಿಕೆ ನೀಡುತ್ತಿರುವವರು ಹೊಸದಾಗಿ ಅಯ್ಕೆಯಾದ ಶಾಸಕರುಗಳು. ಅವರಿಗೆ ಇನ್ನೂ ಅನುಭವದ ಕೊರತೆ ಇದೆ. ಅವರಿಗೆ ಒಂದೆರಡು ಹೊಡೆತ ಬಿದ್ದ ಮೇಲೆ ಸುಮ್ಮನಾಗುತ್ತಾರೆ ಎಂದರು.
ಜಾತಿಗಣತಿ ಮೊದಲ ಕ್ಯಾಬಿನೆಟ್ನಲ್ಲಿ ಚರ್ಚೆ ಆಗುತ್ತದೆ: ಜಾತಿ ಜನಗಣತಿ ವಿಚಾರ ಕ್ಯಾಬಿನೆಟ್ನಲ್ಲಿ ನಿರ್ಣಯವಾಗುತ್ತದೆ. ಆಗ ಎಲ್ಲವೂ ತಿಳಿದು ಬರುತ್ತದೆ. ಮೊದಲು ಕ್ಯಾಬಿನೆಟ್ನಲ್ಲಿ ಚರ್ಚೆ ನಡೆಸಬೇಕು. ನಂತರ ಅದನ್ನು ವಿಧಾನಸಭೆಯಲ್ಲಿ ಚರ್ಚೆಗೆ ತರಲಾಗುವುದು. ಯಾವುದೇ ವರದಿ ಬರುವಾಗ ಅದರ ಬಗ್ಗೆ ಚರ್ಚೆ ಮಾಡುವುದರಲ್ಲಿ ತಪ್ಪಿಲ್ಲ. ಅದರ ಬಗ್ಗೆ ವೈಜ್ಞಾನಿಕ ಅಥವಾ ಅವೈಜ್ಞಾನಿಕ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ತಪ್ಪೇನಿದೆ. ಈಗ ನಮ್ಮ ಎಪಿಎಂಸಿ ಕಾಯ್ದೆಯ ಬಗ್ಗೆ ವಿಧಾನಸಭೆಯ ಕೆಳಮನೆಯಲ್ಲಿ ಬಿಲ್ ಪಾಸಾಯಿತು. ಆದರೆ ಮೇಲ್ಮನೆಯಲ್ಲಿ ಅದಕ್ಕೆ ವಿರೋಧ ವ್ಯಕ್ತವಾಯಿತು. ಅದಕ್ಕೆ ಮೇಲ್ಮನೆ ಸದಸ್ಯರನ್ನು ಕರೆದುಕೊಂಡು ಪ್ರವಾಸ ನಡೆಸುತ್ತಿದ್ದೇವೆ. ಇದರ ಮೇಲೆಯೇ ಬಿಲ್ ಅನ್ನು ಪಾಸ್ ಮಾಡಬೇಕಾಗುತ್ತದೆ ಎಂದರು.