ಶಿವಮೊಗ್ಗ:ಸ್ಯಾಂಟ್ರೋ ರವಿ ಕಾಮುಕ ವ್ಯಾಪಾರಿ ಆತನ ಮೇಲೆ ಮೈಸೂರಿನಲ್ಲಿ ಸಾಕಷ್ಟು ಪ್ರಕರಣಗಳಿವೆ ಎಂದು ಆಪ್ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು ಅಶಕ್ತವಾಗಿರುವ ಸರ್ಕಾರ ಹುಳ, ಹುಪ್ಪೆ, ನಾರಿ ಇತವರ ಸಹಾಯ, ಬ್ರೋಕರ್ ಗಳು ಏಜೆಂಟರ ಸಹಕಾರ ತೆಗೆದುಕೊಳ್ಳಲು ಹೋಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದ ಸರ್ಕಾರ ಜನರಿಗಷ್ಟೇ ಉತ್ತರಿಸಬೇಕು, ಇಂತಹ ರೌಡಿಗಳು, ತಲೆ ಹಿಡುಕರ ಸಹವಾಸ ಮಾಡುವ ಅಗತ್ಯವಿಲ್ಲ ಎಂದು ರಾವ್ ಗರಂ ಆದರು.
ಈ ಹಿಂದೆ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ನಲ್ಲಿ ಗೂಂಡಾಗಳಿಗೆ ಪ್ರೋತ್ಸಾಹ ಕೊಟ್ಟರಾ. ಉತ್ತರ ಪ್ರದೇಶದಲ್ಲಿ ಎಲ್ಲಾ ಗೂಂಡಾಗಳಿಗೆ ಆಗ ಬಲಿ ಹಾಕಿದ್ದರು. ನೀವು ಕೂಡ ಈ ರೀತಿಯ ಗೂಂಡಾಗಳಿಗೆ ಬಲಿ ಹಾಕಿ ಎಂದು ರಾಜ್ಯ ಸರ್ಕಾರವನ್ನು ಭಾಸ್ಕರ್ ರಾವ್ ಒತ್ತಾಯಿಸಿದರು. ಸಚಿವರ ಹೆಸರುಗಳನ್ನು ನಾನು ವೈಯುಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ, ರಾಜ್ಯದ ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರಾಜಕಾರಣಿಗಳ ಬಗ್ಗೆ ಅಗೌರವವಾಗಿ ನೋಡುತ್ತಿದ್ದಾರೆ. ಸಿಡಿ ಪ್ರಕರಣ ಅದು, ಇದು ಅಂತಾ ನೋಡುತ್ತಿದ್ದಾರೆ. ಏನು ಇಲ್ಲದೇ, ಅವರೆಲ್ಲಾ ಯಾಕೆ ಸ್ಟೇ ತೆಗೆದುಕೊಂಡು ಬಂದರು. ಏನಾದರೂ ಇದ್ದರೆ ತಾನೇ ಸ್ಟೇ ತೆಗೆದುಕೊಂಡು ಬರೋದು. ನಮ್ಮ ಮೇಲೆ, ನಿಮ್ಮ ಮೇಲೆ ಸಿಡಿ ಆರೋಪ ಬಂದರೆ, ಏನಾದರೂ ಮಾಡಿಕೊಂಡು ಹೋಗಿ ಅನ್ನುತ್ತೇವೆ. ಏಕೆಂದರೆ ನಾವು ಎಲ್ಲರೂ ಸ್ವಚ್ಛವಾಗಿರುವವರು ಎಂದರು.
ಸಿಡಿ ಬಿಡುಗಡೆ ಮಾಡುತ್ತೆ ಎಂದರೇ ಹೈಕೋರ್ಟಿನಲ್ಲಿ ಹೋಗಿ ಸ್ಟೇ ತೆಗೆದುಕೊಂಡು ಬರುತ್ತಾರೆ. ಹೀಗೆ ಮಾಡಿದರೆ ಕುಂಬಳಕಾಯಿ ಕಳ್ಳ ಎಂದರೇ, ಹೆಗಲು ಮುಟ್ಟಿ ನೋಡಿದ ಎಂಬಂತಾಗುತ್ತದೆ. ಸ್ಯಾಂಟ್ರೋ ರವಿ ನೋಟುಗಳನ್ನಿಟ್ಟುಕೊಂಡು ಫೋಟೋಗಳನ್ನು ತೆಗೆಸಿಕೊಂಡಿದ್ದಾನೆ. ಇದೆಲ್ಲದರ ಹಿಂದೆ ರಾಜಕಾರಣಿಗಳಿದ್ದಾರೆ. ಇಂತಹವರನ್ನು ರಾಜಕಾರಣಿಗಳು ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂದು ಎಎಪಿ ಉಪಾಧ್ಯಕ್ಷರು ಒತ್ತಾಯಿಸಿದರು.