ಶಿವಮೊಗ್ಗ:ಮೈಸೂರಿನಂತೆ ಶಿವಮೊಗ್ಗ ನಗರದಲ್ಲಿಯೂ ವಿಜೃಂಭಣೆ ಹಾಗೂ ಸಂಪ್ರದಾಯಬದ್ಧವಾಗಿ ನಾಡಹಬ್ಬ ದಸರಾ ಆಚರಿಸಲಾಗುತ್ತದೆ. ಮಹಾನಗರ ಪಾಲಿಕೆ ವತಿಯಿಂದ 10 ದಿನಗಳ ದಸರಾ ಆಚರಣೆ ಮಾಡಲಾಗುತ್ತದೆ. ವಿಜಯ ದಶಮಿಯಂದು ನಗರದಲ್ಲಿ ಅಂಬಾರಿ ಮೆರವಣಿಗೆ ನಡೆಯುತ್ತದೆ. ತಾಯಿ ಚಾಮುಂಡೇಶ್ವರಿಯನ್ನು ಆನೆ ಮೇಲೆ ಮೆರವಣಿಗೆ ಮಾಡಲಾಗುತ್ತದೆ.
ಮೈಸೂರಿನಲ್ಲಿ ಅಂಬಾರಿಯನ್ನು ಅರ್ಜುನ ಆನೆ ಹೊತ್ತರೆ, ಶಿವಮೊಗ್ಗದಲ್ಲಿ ಅತ್ಯಂತ ಸೌಮ್ಯ ಸ್ವಭಾವದ ಸಾಗರ ಆನೆ ಚಾಮುಂಡಿಯನ್ನು ಹೊತ್ತು ಸಾಗಲಿದ್ದಾನೆ. ಇದಕ್ಕಾಗಿ ಕಳೆದ ಮೂರು ದಿನಗಳಿಂದ ಸಕ್ರೆಬೈಲಿನ ಸಾಗರ, ಹೇಮಾವತಿ ಹಾಗೂ ನೇತ್ರಾವತಿ ಆನೆಗಳನ್ನು ಶಿವಮೊಗ್ಗಕ್ಕೆ ತರಲಾಗಿದೆ. ನಾಳೆ ಅಂಬಾರಿ ಹೊರಲು ಸತತ ಮೂರು ದಿನ ತಾಲೀಮು ನಡೆಸಲಾಗಿದೆ. ಈ ನಿಟ್ಟಿನಲ್ಲಿ ಇಂದು ಸಂಜೆ ಅಂತಿಮ ತಾಲೀಮು ನಡೆಯಿತು.
ಆನೆಗಳು ವಾಸ್ತವ್ಯ ಹೊಡಿರುವ ಕೋಟೆ ರಸ್ತೆಯ ವಾಸವಿ ಶಾಲೆಯಿಂದ ಎಸ್ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ನೆಹರು ರಸ್ತೆ, ಟಿ.ಶೀನಪ್ಪ ಶೇಟ್ಡಿ ವೃತ್ತ, ದುರ್ಗಿಗುಡಿ ಮುಖ್ಯ ರಸ್ತೆ, ಡಾ.ಅಂಬೇಡ್ಕರ್ ವೃತ್ತ, ಸಂಗೊಳ್ಳಿರಾಯಣ್ಣ ರಸ್ತೆಯ ಮೂಲಕ ಫ್ರೀಡಂ ಪಾರ್ಕ್ ತಲುಪಿದವು. ಯಾವುದೇ ಅಡೆತಡೆ ಇಲ್ಲದೆ ಗಜಗಾಂಭಿರ್ಯದಿಂದಲೇ ಹೆಜ್ಜೆ ಹಾಕಿದವು.