ಶಿವಮೊಗ್ಗ:ಮಾ.3 ರಂದು ರಾಜ್ಯದ ಬಜೆಟ್ ಮಂಡನೆ ಮಾಡಲಾಗುವುದು. ಬಜೆಟ್ನಲ್ಲಿ ರೈತರ ಆದಾಯ ಹೆಚ್ಚಳಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯ ಬಜೆಟ್ ಮಂಡನೆಯಲ್ಲಿ ರೈತ ಆದಾಯ ಹೆಚ್ಚಳಕ್ಕೆ ಒತ್ತು: ಬಿಎಸ್ವೈ
ಮಾ.3 ರಂದು ರಾಜ್ಯದ ಬಜೆಟ್ ಮಂಡನೆ ಮಾಡಲಾಗುವುದು. ಬಜೆಟ್ನಲ್ಲಿ ರೈತರ ಆದಾಯ ಹೆಚ್ಚಳಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸ್ವ ಕ್ಷೇತ್ರ ಶಿಕಾರಿಪುರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆರಂಭಿಸಲಾಗಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು. ಇದಕ್ಕೆ ಅಗತ್ಯವಿರುವ ಅನುದಾನವನ್ನು ಒದಗಿಸಲಾಗುವುದು ಎಂದರು. ರೈತರ ಆದಾಯ ಹೆಚ್ಚಿಸಲು ಯೋಜನೆ ಹಮ್ಮಿ ಕೊಳ್ಳಲಾಗುವುದು. ಕೇಂದ್ರ ಸರ್ಕಾರದ ನೆರವಿನಿಂದ ಜಿಲ್ಲೆಯಲ್ಲಿ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿದೆ. ನೂತನ ರೈಲ್ವೆ ಮಾರ್ಗ ಯೋಜನೆ ಆರಂಭಿಸಲಾಗಿದೆ. 10 ತಿಂಗಳ ಒಳಗಾಗಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡು ವಿಮಾನ ಹಾರಾಟ ಆರಂಭಿಸಲಾಗುವುದು. ವಿಮಾನ ನಿಲ್ದಾಣದಿಂದ ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳ ಆರಂಭಕ್ಕೆ ಪೂರಕ ವಾತಾವರಣ ನಿರೀಕ್ಷೆ ಮಾಡಲಾಗಿದೆ ಎಂದರು.
ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ಸುಮಾರು 7 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಹಣಕಾಸು ಸ್ಥಿತಿಗತಿ ನೋಡಿಕೊಂಡು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಕಡಿಮೆ ಬಡ್ಡಿದರದಲ್ಲಿ ಗುಡಿ ಕೈಗಾರಿಕೆಗಳಿಗೆ ನೆರವು ಯೋಜನೆ, ರಸ್ತೆಬದಿ ವ್ಯಾಪಾರ ಮಾಡುವ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿದರದಲ್ಲಿ ನೆರವು ಒದಗಿಸಲು ಬಜೆಟ್ನಲ್ಲಿ ಅನುದಾನ ನೀಡಲಾಗುವುದು. ದಾವೋಸ್ನಲ್ಲಿ ನಡೆಯುವ ಸಮಾವೇಶದಲ್ಲಿ ಮೂರು ದಿನಗಳ ಕಾಲ ಭಾಗವಹಿಸಲು ತೆರಳಲಿದ್ದು ರಾಜ್ಯದಲ್ಲಿ ಬಂಡವಾಳ ತೊಡಗಿಸಲು ಕೈಗಾರಿಕೋದ್ಯಮಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.