ಶಿವಮೊಗ್ಗ: ಸೋಲು ಬಿಜೆಪಿಯನ್ನು ಅಲ್ಲಾಡಿಸಿಲ್ಲ, ಕೆಲವರನ್ನು ಅಲ್ಲಾಡಿಸಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಇಂದು ಮಾತನಾಡಿದ ಅವರು, ಕಷ್ಟಪಟ್ಟು ಪಕ್ಷ ಕಟ್ಟಿದ್ದೇವೆ. ತುರ್ತು ಪರಿಸ್ಥಿತಿಯಲ್ಲಿ ಹುಟ್ಟಿಕೊಂಡ ಪಕ್ಷ ನಮ್ಮದು. ನಾವು ಸೋಲಿಗೆ ಹೆದರಿ ಪರಸ್ಪರ ಕೆಸರೆರಚಿಕೊಳ್ಳುವುದು ಸರಿಯಲ್ಲ. ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪ ಮಾಡಬೇಕು. ಸೋಲನ್ನು ಸರಿಯಾದ ರೀತಿಯಲ್ಲಿ ಸ್ವೀಕರಿಸಬೇಕು. ಚುನಾವಣೆಯಲ್ಲಿ ಸೋಲು ಸ್ವಾಭಾವಿಕ, ಗೆಲುವು ಆಕಸ್ಮಿಕ ಎಂದರು.
ಈಶ್ವರಪ್ಪ ಹೇಳಿಕೆ ವಿಚಾರ:ಬಿಜೆಪಿಯ ಅಶಿಸ್ತಿಗೆ ವಲಸಿಗರು ಕಾರಣ ಎಂದು ಈಶ್ವರಪ್ಪ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಎಲ್ಲವನ್ನು ಬಹಿರಂಗವಾಗಿ ಹೇಳುವುದು ಒಳ್ಳೆಯದಲ್ಲ. ನಾವೆಲ್ಲ ಪಕ್ಷ ನಿಷ್ಠರು ಅನ್ನೋದು ತಿಳಿದಿರಲಿ ಎಂಬ ಸಲಹೆ ನೀಡಿದರು.
ರಾಜ್ಯ ಸರ್ಕಾರ ಬಿಟ್ ಕಾಯಿನ್ ಪ್ರಕರಣ ಸೇರಿದಂತೆ ಎಲ್ಲವನ್ನು ತನಿಖೆಗೆ ಒಳಪಡಿಸಲಿ. ಸರ್ಕಾರ ಎಲ್ಲ ರೀತಿಯ ತನಿಖೆ ಮಾಡಲಿ ಯಾರು ಅಪರಾಧಿಗಳಿದ್ದಾರೋ ಅವರಿಗೆ ಶಿಕ್ಷೆ ಆಗಲಿ. ಪಿಎಸ್ಐ ಹಗರಣ ತನಿಖೆ ಮುಕ್ತಾಯವಾಗಿದೆ. ಈ ಕುರಿತು ಚಾರ್ಚ್‌ಶೀಟ್ ಹಾಕಲಾಗಿದೆ. ಕೋರ್ಟ್ ಏನು ತೀರ್ಮಾನ ಕೈಗೊಳ್ಳುತ್ತೋ ಗೊತ್ತಿಲ್ಲ. ಐದು ವರ್ಷಗಳ ಎಲ್ಲ ಯೋಜನೆ ತನಿಖೆಗೆ ಒಳಪಡಿಸಲಿ, ತನಿಖೆ ಮಾಡ್ತೀವಿ ಮಾಡ್ತೀವಿ ಅಂತ ಹೆದರಿಸುವುದು ಬೇಡ. ಅದನ್ನು ಬಿಟ್ಟು ತನಿಖೆ ಆರಂಭಿಸಲಿ. ಯಾವ ಯಾವ ಹಗರಣವಾಗಿದೆ ಹೊರಬರಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ವ್ಯವಸ್ಥೆ ಸರಿಯಾಗಲಿ ಎಂದರು.