ಕರ್ನಾಟಕ

karnataka

ETV Bharat / state

ನಿರ್ಮಾಣಕ್ಕೂ ಮುನ್ನ ವಿವಾದದಲ್ಲಿ ಶಿವಮೊಗ್ಗ Airport.. ಕಾರಣ? - ಶಿವಮೊಗ್ಗ ವಿಮಾನ ನಿಲ್ದಾಣ

ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್ ವಿನ್ಯಾಸ ಕಾಂಗ್ರೆಸ್​​ನ ಕೆಂಗಣ್ಣಿಗೆ ಗುರಿಯಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್​ನ್ನು ಬಿಜೆಪಿಯ ಚಿಹ್ನೆಯಂತೆ ರೂಪಿಸಲಾಗಿದೆ. ಈ ಬಗ್ಗೆ ಕೋರ್ಟ್ ಮೊರೆ ಹೋಗುವುದಾಗಿ ಕಾಂಗ್ರೆಸ್​​ ಹೇಳಿದೆ.

shivamogga
ಶಿವಮೊಗ್ಗ ವಿಮಾನ ನಿಲ್ದಾಣ

By

Published : Jun 26, 2021, 8:15 AM IST

ಶಿವಮೊಗ್ಗ: ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕನಸು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಯೋಜನೆಗೆ ಇದ್ದ ಅಡೆತಡೆಗಳನ್ನು ಅವರು ನಿವಾರಿಸಿದ್ದರು. ಯೋಜನೆಗೆ ಶಂಕು ಸ್ಥಾಪನೆಗೊಂಡು ಕಾಮಗಾರಿ ಆರಂಭವಾಗಿದೆ. ಆದರೆ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣವೇ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ವಿನ್ಯಾಸ (ನೀಲಿ ನಕ್ಷೆ) ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ‌.

ನಿರ್ಮಾಣಕ್ಕೂ ಮುನ್ನ ವಿವಾದದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ

ಶಿವಮೊಗ್ಗ ಹೊರವಲಯದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಈಗಾಗಲೇ ರನ್ ವೇ ಕಾಮಗಾರಿ ಶೇ.60ರಷ್ಟು ಪೂರ್ಣಗೊಂಡಿದೆ. ಟರ್ಮಿನಲ್ ಕೆಲಸ ಇನ್ನೂ ಆರಂಭಗೊಂಡಿಲ್ಲ. ಸದ್ಯ ಟರ್ಮಿನಲ್ ನೀಲಿ ನಕ್ಷೆಯನ್ನು ಬಿಡುಗಡೆಗೊಳಿಸಲಾಗಿದೆ. ಈ ನೀಲಿ ನಕ್ಷೆಗೆ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಒಪ್ಪಿಗೆಯನ್ನೂ ಸೂಚಿಸಿದೆ.

ಆದರೆ ಟರ್ಮಿನಲ್ ವಿನ್ಯಾಸ ಕಾಂಗ್ರೆಸ್​​ನ ಕೆಂಗಣ್ಣಿಗೆ ಗುರಿಯಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್​ನ್ನು ಬಿಜೆಪಿಯ ಚಿಹ್ನೆಯಂತೆ ರೂಪಿಸಲಾಗಿದೆ. ಈ ಬಗ್ಗೆ ಕೋರ್ಟ್ ಮೊರೆ ಹೋಗುವುದಾಗಿ ಕಾಂಗ್ರೆಸ್​ ಮುಖಂಡರು ಹೇಳುತ್ತಿದ್ದಾರೆ.

ಟರ್ಮಿನಲ್ ವಿನ್ಯಾಸಕ್ಕೆ ಕಾಂಗ್ರೆಸ್ ಕ್ಯಾತೆ:

ಸಿಎಂ ಯಡಿಯೂರಪ್ಪ ಅವರ ಕನಸಿನ ಕೂಸು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಅತಿ ಸುಂದರವಾಗಿ ನಿರ್ಮಾಣ ಮಾಡಲಾಗುತ್ತಿದೆ. ಟರ್ಮಿನಲ್ ವಿನ್ಯಾಸವವನ್ನು ಕಮಲದ ಆಕೃತಿ ಹೋಲುವಂತೆ ನಿರ್ಮಾಣ ಮಾಡಲಾಗುತ್ತಿದೆ. ಇದು ಕಾಂಗ್ರೆಸ್​​ನ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಪಕ್ಷದ ಪ್ರಚಾರಕ್ಕಾಗಿ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ.

ಕಮಲ ಮಹಾಲಕ್ಷ್ಮಿಯ ಸಂಕೇತ:

ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ಮುಖಂಡರ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಕಮಲ ಮಹಾಲಕ್ಷ್ಮಿಯ ಸಂಕೇತ. ಕಾಂಗ್ರೆಸ್ ನಾಯಕರು ವಿರೋಧ ಮಾಡುವುದಕ್ಕೆ ಅರ್ಥವೇ ಇಲ್ಲ. ಹಸ್ತ ಕಾಂಗ್ರೆಸ್​​ನ ಗುರುತು ಎಂದು ಕೈ ಕಟ್ ಮಾಡಿಕೊಳ್ಳಲು ಆಗುತ್ತಾ? ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2008ರಲ್ಲಿ ಯಡಿಯೂರಪ್ಪ ಅವರ ಶ್ರಮದಿಂದಾಗಿ ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಮಂಜೂರಾಗಿತ್ತು. ಬಳಿಕ ತಾಂತ್ರಿಕ ಕಾರಣದಿಂದಾಗಿ ಏರ್​ಪೋರ್ಟ್​ ಕಾಮಗಾರಿ ಸ್ಥಗಿತಗೊಂಡಿತ್ತು. ಯಡಿಯೂರಪ್ಪ ಅವರು ಮತ್ತೆ ಸಿಎಂ ಆದ ಬಳಿಕ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದ್ದು, ಮುಂದಿನ ವರ್ಷದ ಏಪ್ರಿಲ್​ ತಿಂಗಳೊಳಗೆ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ವಿವಾದವೊಂದು ಹುಟ್ಟಿಕೊಂಡಿದ್ದು, ಮುಂದೇನಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಶಿವಮೊಗ್ಗ ವಿಮಾನ ನಿಲ್ದಾಣ ವಿನ್ಯಾಸ ವಿಚಾರ.. ಬಿಜೆಪಿ ಕಮಲ ಚಿಹ್ನೆ ಕಳೆದುಕೊಳ್ಳಬೇಕಾಗುತ್ತೆ.. ಕೈ ನಾಯಕರ ಎಚ್ಚರ

ABOUT THE AUTHOR

...view details