ಶಿವಮೊಗ್ಗ : ಸಂಸದ ಬಿ.ವೈ ರಾಘವೇಂದ್ರ ಅವರು ಭಾನುವಾರ ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿ ಉದ್ಘಾಟನೆ ಮಾಡಿದ ನೂತನ ಸೇತುವೆ ಕಾರ್ಯಕ್ರಮದಲ್ಲಿ ಶಿಷ್ಟಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇತುವೆ ಉದ್ಘಾಟನೆ ಅಧಿಕೃತವೋ? ಅನಧಿಕೃತವೋ? ಎಂಬ ಪ್ರಶ್ನೆ ನನಗೆ ಮಾತ್ರವಲ್ಲ. ನಗರದ ಎಲ್ಲ ಜನರಲ್ಲಿ ಉದ್ಬವವಾಗಿದೆ. ಉದ್ಘಾಟನೆ ವೇಳೆ ಅಧಿಕಾರಿಗಳು ಇರಲಿಲ್ಲ. ಶಾಸಕರುಗಳು ಇರಲಿಲ್ಲ. ಸೇತುವೆ ಉದ್ಘಾಟನೆ ಕುರಿತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇಂಜಿನಿಯರ್ಗಳಿಗೆ ಫೋನ್ ಮಾಡಿ ಕೇಳಿದರೆ, ಅವರು ನಮಗೆ ಗೂತ್ತೇ ಇಲ್ಲ ಎಂದು ತಿಳಿಸಿದ್ದಾರೆ. ಸೇತುವೆಗೆ ಇನ್ನೂ ಅಧಿಕಾರಿಗಳು ಎನ್ಓಸಿ ನೀಡಿಲ್ಲ. ಅಲ್ಲದೇ, ಅವರದೇ ಪಕ್ಷದ ಎಂಎಲ್ಸಿಗಳಾದ ರುದ್ರೇಗೌಡರು, ಡಿ.ಎಸ್ ಅರುಣ್ ಅವರನ್ನು ಕರೆಯದೇ ಶಿಷ್ಟಚಾರ ಉಲ್ಲಂಘನೆ ಮಾಡಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ತರಾತುರಿಯಲ್ಲಿ ಸೇತುವೆ ಉದ್ಘಾಟನೆ ಮಾಡಿದ್ದಾರೆ. ಸೇತುವೆ ಭದ್ರತೆಯು ಯಾರ ಹೊಣೆ ಎಂದು ಪ್ರಶ್ನಿಸಿದರು.
ಕಾಮಗಾರಿ ಹಣವನ್ನು ಬಿಜೆಪಿ ಪಕ್ಷ ಹಾಕಿದೆಯೋ? ಸಾರ್ವಜನಿಕರ ತೆರಿಗೆ ಹಣ ಬಳಸಿದ್ದಾರೋ ? ಗೊತ್ತಾಗುತ್ತಿಲ್ಲ. ಸಂಸದರು ತಮ್ಮದೆ ಶೈಲಿಯಲ್ಲಿ ಇದ್ದಾರೆ. ಅವರಿಗೆ ರಾಜ್ಯ ಸರ್ಕಾರ ಬದಲಾಗಿದೆ ಎಂಬ ಮಾಹಿತಿ ಇಲ್ಲದಂತಾಗಿದೆ. ಇದು ಸರ್ಕಾರಿ ಸ್ವತ್ತು ಆಗಿದ್ದು, ಗಡಿಬಿಡಿ ಉದ್ಘಾಟನೆ ಹಿಂದೆ ಏನಿದೆ ಎಂದು ಮಂಜುನಾಥ್ ಪ್ರಶ್ನಿಸಿದರು.