ಶಿವಮೊಗ್ಗ: ಎಲೆ ಚುಕ್ಕಿ ರೋಗದಿಂದ ಅಡಕೆ ಬೆಳೆಗಾರರು ಆಂತಕಕ್ಕೆ ಒಳಗಾಗಿದ್ದಾರೆ. ಎಲೆಚುಕ್ಕಿರೋಗದ ಭೀಕರತೆ ತಿಳಿದು ಗೃಹ ಸಚಿವರು ಆರಗ ಜ್ಞಾನೇಂದ್ರ ಇಂದು ತೀರ್ಥಹಳ್ಳಿ ತಾಲೂಕು ಆಗುಂಬೆ ಹೋಬಳಿಯ ಗಿಳಿಗನಮನೆ ಗ್ರಾಮದಲ್ಲಿ ಶಂಕರಪ್ಪ ಸೇರಿದಂತೆ ಅಕ್ಕ ಪಕ್ಕ ತೋಟಗಳಿಗೆ ಭೇಟಿ ನೀಡಿ ಎಲೆಚುಕ್ಕಿ ರೋಗಕ್ಕೆ ತುತ್ತಾದ ತೋಟಗಳ ವೀಕ್ಷಣೆ ಮಾಡಿದರು.
ನಂತರ ಮಾತನಾಡಿದ ಅವರು, ಎಲೆ ಚುಕ್ಕಿ ರೋಗದ ತೀವ್ರತೆ ಹಾಗೂ ಅಡಕೆ ನಷ್ಟದ ಕುರಿತು ಸಿಎಂ ಹಾಗೂ ಸಂಬಂಧ ಪಟ್ಟ ಇಲಾಖೆಯವರ ಜೊತೆ ಮಾತನಾಡಿ, ಪ್ರತಿ ಹೆಕ್ಟೇರ್ಗೆ ನಾಲ್ಕು ಸಾವಿರ ರೂ ಮೌಲ್ಯದ ಔಷಧವನ್ನು ಉಚಿತವಾಗಿ ಸರ್ಕಾರ ನೀಡುವ ಘೋಷಣೆ ಮಾಡಿದರು. ಇದರ ಸದುಪಯೋಗವನ್ನು ರೈತರು ಪಡೆದುಕೊಂಡು ಎಲೆಚುಕ್ಕಿರೋಗವನ್ನು ಹತೋಟಿ ಮಾಡಬೇಕೆಂದು ವಿನಂತಿಸಿಕೊಂಡಿದ್ದಾರೆ. ಅಲ್ಲದೆ ನಷ್ಟ ಉಂಟಾದ ಅಡಕೆ ತೋಟಗಳಿಗೆ ನಗದು ರೂಪದ ಪರಿಹಾರಕ್ಕೆ ಸರ್ಕಾರದ ಜೊತೆ ಮಾತನಾಡಲಾಗುವುದು ಎಂದರು.
ಈ ವೇಳೆ ಗಿಳಿಗನಮನೆಯಲ್ಲಿಯೇ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕ ವಿಶ್ವವಿದ್ಯಾನಿಲಯ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಎಲೆಚುಕ್ಕಿ ರೋಗದ ಕುರಿತು ಕಾರ್ಯಾಗಾರ ನಡೆಸಲಾಯಿತು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಗೃಹ ಸಚಿವರು ಎಲೆಚುಕ್ಕಿ ರೋಗ, ಹತೋಟಿ ಹಾಗೂ ಔಷಧದ ಕುರಿತು ಕಿರು ಮಾಹಿತಿ ಪುಸ್ತಕವನ್ನು ಬಿಡುಗಡೆ ಮಾಡಿದರು.
ಅಡಕೆಗೆ ಎಲೆಚುಕ್ಕಿ ರೋಗ ತಡೆಗೆ ಸರ್ಕಾರದಿಂದ ಉಚಿತ ಔಷಧ ವಿತರಣೆ ಮುಂಜಾಗ್ರತಾ ಕ್ರಮ ವಹಿಸಬೇಕು :ನಂತರ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ ಅವರು, ನಮ್ಮ ಜಿಲ್ಲೆಯಲ್ಲಿ ಒಂದು ಲಕ್ಷ ಹೆಕ್ಟೆರ್ಗೂ ಅಧಿಕ ಪ್ರಮಾಣದಲ್ಲಿ ಅಡಕೆ ಬೆಳೆಯುತ್ತಾರೆ. ಆದರೆ ಎಲೆಚುಕ್ಕಿ ರೋಗದಿಂದ ರೈತರಿಗೆ ಸಾಕಷ್ಟು ಹಾನಿಯಾಗಿದೆ. ನಮ್ಮಲ್ಲಿಯೇ ಇರುವ ಕೃಷಿ ಮತ್ತು ತೋಟಗಾರಿಕ ವಿವಿಯು ಅಡಕೆಗೆ ಬರುವ ರೋಗಗಳ ಬಗ್ಗೆ ಮುಂಜಾಗ್ರತವಾಗಿ ಔಷಧಗಳನ್ನು ಕಂಡು ಹಿಡಿಯಬೇಕಿತ್ತು. ಆದರೆ ಆ ಕೆಲಸ ಮಾಡಿಲ್ಲ. ಇನ್ನೂ ಮುಂದಾದರೂ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿ ಕೆಲಸಮಾಡಬೇಕೆಂದು ಸಣ್ಣದಾಗಿ ಎಚ್ಚರಿಕೆ ನೀಡಿದರು.
ಅಧಿಕಾರಿಗಳಿಗೆ ತರಾಟೆ : ನಂತರ ನಡೆದ ಅಧಿಕಾರಿಗಳ ಅಡಕೆ ಬೆಳೆಗಾರರ ಕಾರ್ಯಾಗಾರದಲ್ಲಿ ಅಡಕೆ ಬೆಳೆಗಾರರು ಅಡಕೆ ಸಂಶೋಧನಾ ಕೇಂದ್ರ, ಕೃಷಿ ವಿವಿಯ ಕುಲಪತಿಗಳಿಗೆ ನಮ್ಮ ಸಂಕಷ್ಟಕ್ಕೆ ಬಾರದೆ ಏನ್ ಮಾಡ್ತಾ ಇದ್ದಾರೆ ಎಂದು ಜನ ತೀವ್ರ ತರಾಟೆಗೆ ತೆಗೆದುಕೊಂಡರು. ನಿಮ್ಮ ಅಧಿಕಾರಿಗಳಿಗೆ ಎಲೆಚುಕ್ಕಿ ರೋಗಕ್ಕೆ ಯಾವ ಔಷಧ ಸಿಂಪಡಿಸಬೇಕೆಂದು ಕೇಳಿದ್ರು ಯಾವುದೇ ರೀತಿಯಲ್ಲಿ ಉತ್ತರಿಸುವುದಿಲ್ಲ. ಅದೇ ಖಾಸಗಿ ಔಷಧದ ಅಂಗಡಿಗೆ ಹೋಗಿ ವಿಚಾರಿಸಿದರೆ ಅವರು ಔಷಧ ನೀಡುತ್ತಿದ್ದಾರೆ. ಈಗ ತಂತ್ರಜ್ಞಾನ ಬೆಳೆದಿದೆ. ಈಗ ನಿಮ್ಮ ವಿವಿ ಕಡೆಯಿಂದ ಅಥವಾ ಇಲಾಖೆಯ ಕಡೆಯಿಂದ ಯೂಟ್ಯೂಬ್ ಚಾನೆಲ್ನಲ್ಲಿ ನಮಗೆ ಮಾಹಿತಿ ನೀಡಿ ಎಂದರು.
ಇದನ್ನೂ ಓದಿ :ವಿದೇಶಿ ಅಡಕೆ ಆಮದಿನಿಂದ ಬೆಳೆಗಾರರರು ಭಯಪಡಬೇಕಿಲ್ಲ.. ಅಡಕೆ ಸಹಕಾರ ಸಂಘಗಳ ಅಭಯ