ಕರ್ನಾಟಕ

karnataka

ETV Bharat / state

ನೆನೆಗುದಿಗೆ ಬಿದ್ದಿರುವ ಮೇಕೆದಾಟು ಯೋಜನೆಗೆ ಮರು ಚಾಲನೆ

ನೆನೆಗುದಿಗೆ ಬಿದ್ದಿರುವ ಮೇಕೆದಾಟು ಯೋಜನೆಗೆ ಮರು ಚಾಲನೆ ಸಿಗುವ ಆಸೆ ಚಿಗುರೊಡೆದಿತ್ತು. ಜಲಸಂಪನ್ಮೂಲ ಸಚಿವ ರಮೇಶ್ ಚಾರಕಿಹೊಳಿ ಈ ಮಹತ್ವಾಕಾಂಕ್ಷೆಯ ಕೆಲಸಕ್ಕೆ ಕೈ ಹಾಕಿದ್ದರು. ಈ ಸಚಿವರು ಕೂಡ ಸ್ಥಳ ಪರಿಶೀಲನೆ ನಡೆಸಿ ಆದಷ್ಟು ಬೇಗ ಕಾಮಗಾರಿ ಕೈಗೊಳ್ಳುವ ಭರವಸೆ ನೀಡಿದ್ದರು.

pros of mekedatu project
ಮೇಕೆದಾಟು ಅಣೆಕಟ್ಟು ಯೋಜನೆ.

By

Published : Mar 23, 2021, 11:28 PM IST

ರಾಮನಗರ: ಮಹತ್ವಾಕಾಂಕ್ಷೆಯ ಮೇಕೆದಾಟು ಅಣೆಕಟ್ಟು ಯೋಜನೆ ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಈ ಬೃಹತ್ ಯೋಜನೆ ಆದಷ್ಟು ಬೇಗ ಆರಂಭವಾಗಬೇಕೆಂದು ಹಳೇ ಮೈಸೂರು ಪ್ರಾಂತ್ಯ ಜಿಲ್ಲೆಗಳ ಜನತೆ ಕನಸು ಕಟ್ಟಿಕೊಂಡಿದ್ದಾರೆ. ಹಾಗಾದ್ರೆ ಈ ಮೇಕೆದಾಟು ಯೋಜನೆ ಏನು? ಈ ಯೋಜನೆ ಪೂರ್ಣಗೊಂಡ್ರೆ ಆಗುವ ಅನುಕೂಲಗಳೇನು? ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಏನಿದು ಮೇಕೆದಾಟು ಯೋಜನೆ?:ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟು. ಇಲ್ಲೊಂದು ಬೃಹತ್ ಅಣೆಕಟ್ಟು ನಿರ್ಮಾಣ ಮಾಡಬೇಕೆಂಬುದು ಸರ್ಕಾರದ ಮಹತ್ತರ ಯೋಜನೆ. 2018ರ ಡಿಸೆಂಬರ್ ತಿಂಗಳಿನಲ್ಲಿ ಅಂದಿನ ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಮೇಕೆದಾಟು ಯೋಜನೆಗೆ ಮುಂದಾಗಿದ್ದರು. ಅಂದು ಸ್ಥಳ ಪರಿಶೀಲನೆ ನಡೆಸಿದ್ದ ಸಚಿವರು ಯೋಜನೆ ಡಿಪಿಆರ್ ಸಿದ್ಧಗೊಳಿಸಿದ್ರು. ಆದ್ರೆ ಸರ್ಕಾರದ ಪತನದ ನಂತರ ಈ ಯೋಜನೆ ಕೂಡ ನೆನೆಗುದಿಗೆ ಬಿದ್ದಿತ್ತು.

ನೆನೆಗುದಿಗೆ ಬಿದ್ದಿದ್ದ ಮೇಕೆದಾಟು ಯೋಜನೆಗೆ ಮರು ಚಾಲನೆ

ನೆನೆಗುದಿಗೆ ಬಿದ್ದಿದ್ದ ಮೇಕೆದಾಟು ಯೋಜನೆಗೆ ಮರು ಚಾಲನೆ ಸಿಗುವ ಆಸೆ ಚಿಗುರೊಡೆದಿತ್ತು. ಜಲಸಂಪನ್ಮೂಲ ಸಚಿವ ರಮೇಶ್ ಚಾರಕಿಹೊಳಿ ಈ ಮಹತ್ವಾಕಾಂಕ್ಷೆಯ ಕೆಲಸಕ್ಕೆ ಕೈ ಹಾಕಿದ್ದರು. ಈ ಸಚಿವರು ಕೂಡ ಸ್ಥಳ ಪರಿಶೀಲನೆ ನಡೆಸಿ ಆದಷ್ಟು ಬೇಗ ಕಾಮಗಾರಿ ಕೈಗೊಳ್ಳುವ ಭರವಸೆ ನೀಡಿದ್ದರು.

ಮೇಕೆದಾಟು ಯೋಜನೆಯಿಂದಾಗುವ ಅನುಕೂಲಗಳು:ಮೇಕೆದಾಟು ಯೋಜನೆ ಜಾರಿಯಿಂದಾಗಿ ಬಯಲು ಸೀಮೆ ಜಿಲ್ಲೆಗಳೊಂದಿಗೆ ಬೆಂಗಳೂರು ಮಹಾನಗರಕ್ಕೂ ನೀರಿನ ಅಭಾವ ನೀಗಲಿದೆ. ಇದರಿಂದ ಬೆಂಗಳೂರಿಗೆ 4.75 ಟಿಎಂಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ತಮಿಳುನಾಡಿಗೆ ಹೆಚ್ಚುವರಿಯಾಗಿ ಹರಿಯುತ್ತಿರುವ ಕಾವೇರಿ ನೀರು ರಾಜ್ಯಕ್ಕೆ ಸದ್ಬಳಕೆಯಾಗಲಿದೆ. ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳಿಗೂ ಅನುಕೂಲವಾಗುವ ಈ ಯೋಜನೆಗೆ ಈಗಾಗಲೇ ಸ್ಥಳವನ್ನೂ ಗುರುತಿಸಲಾಗಿದೆ.

ವಿನಾಕಾರಣ ಸಮುದ್ರದ ಪಾಲಾಗಲಿರುವ ನೀರನ್ನು ಯೋಜಿತ ಅಣೆಕಟ್ಟೆಯಲ್ಲಿ ಸಂಗ್ರಹಿಸಿಟ್ಟುಕೊಂಡು ವಿದ್ಯುತ್ ಉತ್ಪಾದನೆ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಘನ ಉದ್ದೇಶವನ್ನು ಹೊಂದಲಾಗಿದೆ.

ಈ ಯೋಜನೆಯನ್ನ ಕಾವೇರಿ ನ್ಯಾಯಾಧಿಕರಣ ತೀರ್ಪಿನಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರಿನ ಪರಿಮಿತಿಯಲ್ಲೇ ರೂಪಿಸಲಾಗಿದೆ. ಮೇಕೆದಾಟು ಯೋಜನೆ ಅನುಷ್ಠಾನಗೊಂಡಿದ್ದರೆ, ಬಯಲು ಸೀಮೆ ಜಿಲ್ಲೆಗಳ ಜನರಿಗೆ ಕುಡಿಯುವ ನೀರಿಗೆ ಮತ್ತೊಂದು ನೆಲೆ ದೊರೆಯಬಹುದಿತ್ತು. ಒಂಟಿ ಕುಡ್ಲು ಅರಣ್ಯ ಪ್ರದೇಶದಲ್ಲಿ ಮೇಕೆದಾಟು ಡ್ಯಾಂ ನಿರ್ಮಾಣಗೊಳ್ಳಲಿದೆ. ಇಲ್ಲಿಂದ ಸಂಗಮ 3 ಕಿ. ಮೀ ದೂರದಲ್ಲಿದ್ದರೆ, 1.5 ಕಿ.ಮೀ ದೂರದಲ್ಲಿ ಮೇಕೆದಾಟು ಇದೆ. ಮೇಕೆದಾಟಿನಿಂದ 2 ಕಿ.ಮೀ ದೂರದಲ್ಲಿ ತಮಿಳುನಾಡು ಗಡಿ ಪ್ರಾರಂಭಗೊಳ್ಳಲಿದೆ.

ಮೇಕೆದಾಟು ತಳ ಮಟ್ಟದಲ್ಲಿ 352 ಮೀಟರ್, ತುಂಬಿ ಹರಿಯುವಾಗ 440 ಮೀಟರ್ ಹಾಗೂ ಅತೀ ಹೆಚ್ಚಿನದಾಗಿ 441 ಮೀಟರ್ ನೀರಿನ ಹರಿವನ್ನು ಶೇಖರಿಸುವಷ್ಟು ಸಾಮರ್ಥ್ಯ ಹೊಂದಿದೆ. ನಿರ್ಮಾಣ ವಾಗಲಿರುವ ಡ್ಯಾಂನ 674.5 ಮೀಟರ್ ಅಗಲ ಇರಲಿದ್ದು, 99 ಮೀಟರ್ ಎತ್ತರ ಇರಲಿದೆ. 17 ಗೇಟ್‌ಗಳನ್ನು ಹೊಂದಿರಲಿದೆ. ಪ್ರಸಕ್ತ ಯೋಜನೆಯಿಂದ ಕರ್ನಾಟಕವು 440 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಲಿದೆ.

ಈ ಯೋಜನೆ ಸಂಬಂಧ ಮತ್ತೊಮ್ಮೆ ಡಿಪಿಆರ್ ತಯಾರಿಸಲು ಬೆಂಗಳೂರಿನ ಇ.ಐ.ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ಗೆ ಕೊಡಲಾಗಿದೆ. ಮೇಕೆದಾಟು ಸಮತೋಲನಾ ಜಲಾಶಯ ಯೋಜನೆಯ ನೀರಿನ ಶೇಖರಣಾ ಸಾಮರ್ಥ್ಯವನ್ನು 67.14 ಟಿ.ಎಂ.ಸಿಗಳಿಗೆ ಸಮ್ಮಿಶ್ರ ಸರ್ಕಾರವೇ ವಿಸ್ತರಿಸಿತ್ತು. ಆದರೆ, ಇದರ ಮಧ್ಯದಲ್ಲಿಯೇ ರಾಜ್ಯದ ಬಿಜೆಪಿ ಸರ್ಕಾರಕ್ಕೆ ಕೇಂದ್ರ ಸರ್ಕಾರವು ಮರುಪರಿಶೀಲನೆ ನಡೆಸುವಂತೆ ಸೂಚಿಸಿತ್ತು.‌ ಈಗ ಬಿಜೆಪಿ ಸರ್ಕಾರದ ಸಚಿವರೇ, ಕೇಂದ್ರ ಸರ್ಕಾರದ ಮುಂದೆ ಯೋಜನೆಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿರುವುದು ಯೋಜನೆ ಕನಸಿಗೆ ಮತ್ತೆ ಜೀವ ಬಂದಂತಾಗಿದೆ. ಆದಷ್ಟು ಶೀಘ್ರದಲ್ಲೇ ಯೋಜನೆ ಜಾರಿಗೊಂಡರೆ ಇಡೀ ಬಯಲು ಸೀಮೆ ಜಿಲ್ಲೆಗಳು ಮಲೆನಾಡಿನ ಮಾದರಿಯಲ್ಲಿ ಹಸಿರುಗೊಳ್ಳಲಿವೆ ಎನ್ನುತ್ತಾರೆ ಸ್ಥಳೀಯರು.

ರಾಜ್ಯದಲ್ಲೂ ಬಿಜೆಪಿ‌ ಸರ್ಕಾರ ಇದೆ. ಕೇಂದ್ರದಲ್ಲೂ ಬಿಜೆಪಿ ಸರ್ಕಾರ ಇದೆ. ಅದಷ್ಟು ಬೇಗ ಈ‌ ಕಾಮಗಾರಿ ಮುಗಿದ್ರೆ ಹಳೇ ಮೈಸೂರು ಪ್ರಾಂತ್ಯದ ಏಳೆಂಟು ಜಿಲ್ಲೆಗಳಿಗೆ ಅನುಕೂಲವಾಗಲಿದೆ.

ABOUT THE AUTHOR

...view details