ರಾಮನಗರ:ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಪ್ರಸನ್ನ ಪಿ ಗೌಡ ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ. ರಾಮನಗರ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ಅವರು ಪ್ರಸನ್ನ ಪಿ ಗೌಡ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಟಿಕಟ್ ಆಕಾಂಕ್ಷಿಗಳ ಎದುರು ಘೋಷಣೆ ಮಾಡಿದ್ದಾರೆ. ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಗಂಗಾಧರ್ ಅವರು ಈ ಘೋಷಣೆ ಮಾಡಿದ್ದಾರೆ. ಆದರೆ ಕೆಪಿಸಿಸಿ ಇನ್ನೂ ಪಟ್ಟಿಯನ್ನು ಪ್ರಕಟಿಸಿಲ್ಲ.
ಬೊಂಬೆನಗರಿ ಚನ್ನಪಟ್ಟಣ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ ಎಂದ್ರೆ ತಪ್ಪಿಲ್ಲ. ಕಾಂಗ್ರೆಸ್ ಪಕ್ಷದಿಂದ ಘಟಾನುಘಟಿ ನಾಯಕರು ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಆದರೆ, ಪ್ರಸ್ತುತ ದಿನಗಳಲ್ಲಿ ರಾಜಕೀಯ ಏರಿಳಿತದ ನಡುವೆ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರು ಕೇಳಿದ್ರು ನಾನೇ ನಾಯಕ ಎನ್ನುವ ಪರಿಸ್ಥಿತಿ ಇತ್ತು. ಆದರೆ, ಚುನಾವಣೆ ಸಮೀಪಿಸುತ್ತಿದ್ದು, ಪ್ರಸನ್ನ ಪಿ ಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಪಕ್ಕಾ ಆಗಿದೆ.
ಎಂಟು ಅಭ್ಯರ್ಥಿಗಳು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರು:ಕಾಂಗ್ರೆಸ್ ಪಕ್ಷದ ಎಂಟು ಆಕಾಂಕ್ಷಿತ ಅಭ್ಯರ್ಥಿಗಳಲ್ಲಿ ಪೈಪೋಟಿ ಇತ್ತು. ಬೋರ್ವೆಲ್ ರಂಗನಾಥ್, ಡಿ.ಕೆ ಕಾಂತರಾಜು, ಪ್ರಸನ್ನಪಿಗೌಡ, ಶರತ್ ಚಂದ್ರ, ಭಗತ್ ರಾಮ್, ಕರುಣಾಕರ್, ಚಂದ್ರಸಾಗರ್, ಇವರು ಎಂಟು ಮಂದಿ ಈಗಾಗಲೇ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಉಳಿದ ಅಭ್ಯರ್ಥಿಗಳು ಹಿಂದಕ್ಕೆ ಸರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವೂ ಪ್ರಸನ್ನ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.
ಅಹಿಂದ ಮತಗಳು ಕಾಂಗ್ರೆಸ್ಗೆ ನಿರ್ಣಾಯಕ: ಚನ್ನಪಟ್ಟಣ ಕ್ಷೇತ್ರದಲ್ಲಿ ಬಲಿಷ್ಟ ಅಭ್ಯರ್ಥಿಗಳು ಯಾರೂ ಇಲ್ಲ ಎಂದಲ್ಲ. ಇಂದಿಗೂ ಕೂಡ ಕ್ಷೇತ್ರದಲ್ಲಿ ಯಾರೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದರೆ ತನ್ನದೇ ಆದ ವೋಟ್ ಬ್ಯಾಂಕ್ ಅನ್ನು ಉಳಿಸಿಕೊಂಡು ಬಂದಿದೆ ಎಂದರೆ ಅತಿಶಯೋಕ್ತಿಯಲ್ಲ. ಇತ್ತೀಚಿನ ರಾಜಕೀಯ ಬೆಳವಣೆಗೆ ನಡುವೆ ಅಹಿಂದಾ ಮತಗಳು ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿ ಪರ ಬಿದ್ದರೆ ರಾಜಕೀಯ ಚಿತ್ರಣ ಬದಲಾಗುವುದರಲ್ಲಿ ಯಾವುದೇ ಸಂಶಯ ಇಲ್ಲ.
ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಸಿ ಎಂ ಸಿದ್ದರಾಮಯ್ಯ ಅವರು ಈ ಕ್ಷೇತ್ರವನ್ನು ಪ್ರತಿಷ್ಠಿತ ಕಣವಾಗಿ ತೆಗೆದುಕೊಂಡಿದ್ದಾರೆ. ಅವರಿಗೆ ರಾಜ್ಯದ ವಿಧಾನಸಭೆ ಕ್ಷೇತ್ರಗಳಲ್ಲಿ ಹೆಚ್ಚು ಅಭ್ಯರ್ಥಿಗಳನ್ನೂ ಗೆಲ್ಲಿಸಿಕೊಂಡುಬರುವ ಹೊಣೆಗಾರಿಕೆ ಕೂಡ ಇದೆ.