ರಾಮನಗರ :ಚನ್ನಪಟ್ಟಣ ತಾಲೂಕಿನ ಅಬ್ಬೂರು ಸೇತುವೆ ಮುಳುಗಡೆಯಾಗಿದ್ದು ಸೇತುವೆ ದಾಟುವ ವೇಳೆ ದ್ವಿಚಕ್ರವಾಹನ ಸಮೇತ ಕೊಚ್ಚಿಕೊಂಡು ಹೋಗುತ್ತಿದ್ದ ಸವಾರರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಕಣ್ವ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಟ್ಟ ಪರಿಣಾಮ ಅಬ್ಬೂರು ಸೇತುವೆ ಸಂಪೂರ್ಣ ಮುಳುಗಡೆಗೊಂಡಿದೆ.
ಕಣ್ವ ಜಲಾಶಯದ ಹಿನ್ನೀರಿನ ಭಾಗದಲ್ಲಿ ಅಧಿಕವಾಗಿ ಮಳೆ ಆಗುತ್ತಿರುವ ಕಾರಣದಿಂದ ಜಲಾಶಯದಿಂದ ನಾಲ್ಕು ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದ್ದು, ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಚನ್ನಪಟ್ಟಣ ತಾಲೂಕಿನ ಅಬ್ಬೂರು, ರಾಮನಗರ, ಕುಣಿಗಲ್, ಮಾಕಳಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಕೋಡಾಂಪುರ ಗ್ರಾಮಕ್ಕೆ ಜಲಕಂಟಕ :ಮಳೆಯಿಂದಾಗಿ ಚನ್ನಪಟ್ಟಣ ತಾಲೂಕಿನ ಕೊಂಡಾಪುರ ಗ್ರಾಮಕ್ಕೆ ಮತ್ತೆ ಜಲಕಂಠಕ ಎದುರಾಗಿದ್ದು, ಮಳೆಯ ಅಬ್ಬರಕ್ಕೆ ಜನಜೀವನ ತತ್ತರಿಸಿದೆ. ಧಾರಾಕಾರವಾಗಿ ಸುರಿದ ಮಳೆಯಿಂದ ಗ್ರಾಮದ ತಗ್ಗು ಪ್ರದೇಶದ ಹಲವು ಮನೆಗಳು ಹೊಲ ಗದ್ದೆಗಳು ಜಲಾವೃತವಾಗಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ.