ರಾಮನಗರ:ಇಂದು ರಾಜ್ಯದಾದ್ಯಂತ ವೈಕುಂಠ ಏಕಾದಶಿಯ ವಿಶೇಷ ಪೂಜೆ ಪುರಸ್ಕಾರಗಳು ಸಾಮಾನ್ಯವಾಗಿದ್ದು, ದೇವಾಲಯಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿರುತ್ತದೆ. ಪೂಜೆಯ ಹಿನ್ನೆಲೆ ರಾಮನಗರ ತಾಲೂಕಿನ ಬಿಡದಿಯ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಭಕ್ತರಿಗಾಗಿ 35 ಸಾವಿರ ಲಡ್ಡುಗಳನ್ನು ತಯಾರಾಗಿವೆ.
ಶಾಸಕ ಎ. ಮಂಜುನಾಥ್ ಕುಟುಂಬದವರು ಇಂದು ವಿಶೇಷ ಪೂಜೆ ಸಲ್ಲಿಸುತ್ತಿರುವ ಹಿನ್ನೆಲೆ ದೇವಾಲಯಕ್ಕೆ ಬರುವ ಭಕ್ತರಿಗಾಗಿ 35 ಸಾವಿರ ಲಡ್ಡುಗಳನ್ನು ತಯಾರಿಸಲಾಗಿದೆ. ಬಿಡದಿಯ ಪ್ರತಿಷ್ಠಿತ ಅಯ್ಯಂಗಾರ್ ಬೇಕರಿಗೆ ಲಾಡು ತಯಾರಿಸಲು ಶಾಸಕ ಎ.ಮಂಜು ತಿಳಿಸಿದ್ದು, ಈಗಾಗಲೇ ಲಾಡುಗಳು ತಯಾರಾಗಿವೆ ಎಂದು ಲಾಡು ತಯಾರಕರು ತಿಳಿಸಿದ್ದಾರೆ.
ವೈಕುಂಠ ಏಕಾದಶಿಯ ಪ್ರಯುಕ್ತ ದೇವಾಲಯದಲ್ಲಿ ಬೆಳಗ್ಗೆ 3 ಗಂಟೆಯಿಂದ ಆರಂಭವಾಗಿರುವ ವಿಶೇಷ ಪೂಜೆ ರಾತ್ರಿ 9 ಗಂಟೆಗೆ ಸಂಪನ್ನವಾಗಲಿದೆ. ಕೋದಂಡರಾಮ ಸ್ವಾಮಿಯನ್ನು ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ ಹಾಗೂ ಭಕ್ತರಿಗೆ ವೈಕುಂಠದ್ವಾರದ ಮೂಲಕ ವಿಶೇಷ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
1939ರಲ್ಲಿ ಸ್ಥಾಪನೆಯಾದ ಈ ದೇವಾಲಯವು ಹತ್ತು - ಹಲವು ವೈಶಿಷ್ಟ್ಯಗಳಿಂದ ಕೂಡಿದ್ದು, ನಕ್ಷತ್ರದ ಆಕಾರದಲ್ಲಿ ನಿರ್ಮಿಸಲಾಗಿದೆ. ಗರ್ಭಗುಡಿಯಲ್ಲಿ ಕೋದಂಡರಾಮನನ್ನು ಪ್ರತಿಷ್ಠಾಪಿಸಲಾಗಿದ್ದು, ಅಕ್ಕ-ಪಕ್ಕದಲ್ಲಿ ಸೀತೆ ಮತ್ತು ಲಕ್ಷ್ಮಣರ ಮೂರ್ತಿಗಳು ಇವೆ. ಕೋದಂಡರಾಮನಿಗೆ ಮೊರೆ ಹೋದರೆ ಇಷ್ಟಾರ್ಥ ಸಿದ್ದಿಸುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.
ಅಲ್ಲದೇ, ಪ್ರತಿ ವೈಕುಂಠ ಏಕಾದಶಿಯಂದು ಈ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನೆರವೇರುತ್ತವೆ. ಸ್ವಾಮಿಗೆ ವಿಶೇಷ ಅಲಂಕಾರ ಮಾಡುವುದರ ಜೊತೆಗೆ ವೈಕುಂಠದ್ವಾರವನ್ನು ತೆರೆಯಲಾಗುತ್ತದೆ. ಈ ದಿನ ಇಲ್ಲಿ ಬಂದು ಸ್ವಾಮಿಯ ದರ್ಶನ ಪಡೆದರೆ ಪುಣ್ಯ ಲಭಿಸುವುದರ ಜೊತೆಗೆ ವೈಕುಂಠದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿದ್ದು, ದರ್ಶನಕ್ಕಾಗಿ ಜನ ಮುಗಿ ಬೀಳುತ್ತಾರೆ.