ರಾಮನಗರ:ನಾನು 2006-07 ರಲ್ಲಿ ಸಿಎಂ ಆಗಿದ್ದ ವೇಳೆ ಸಾರಿಗೆ ಇಲಾಖೆಯಲ್ಲಿ ಹಣ ಡೆಪಾಸಿಟ್ ಇಟ್ಟಿದೆ. ಆದರೆ ಈ ಸರ್ಕಾರದಲ್ಲಿ ಹಣ ಇಲ್ಲ ಅಂದ್ರೆ ಹೇಗೆ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ರು.
ಸರ್ಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ರಾಮನಗರ ಜಿಲ್ಲೆಯ ಬಿಡದಿಯ ಕೇತುಗಾನಹಳ್ಳಿ ತೋಟದ ಮನೆಯಲ್ಲಿ ನಗರಸಭೆ ಸಂಬಂಧ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಭಾಗವಹಿಸಿ ಸುದ್ದಿಗಾರೊಂದಿಗೆ ಅವರು ಮಾತನಾಡಿದ್ರು. ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಉಚಿತವಾಗಿ ಕೆಲ ಯೋಜನೆಗಳನ್ನ ಜಾರಿ ಮಾಡಿ, ಅದರ ಹೊರೆ ಸಾರಿಗೆ ಇಲಾಖೆ ಮೇಲೆ ಹೊರಿಸಿದ್ರೆ ಇಲಾಖೆ ನಷ್ಟವಾಗದೇ ಲಾಭವಾಗುತ್ತಾ? ಎಂದು ಪ್ರಶ್ನಿಸಿದರು.
ಸರ್ಕಾರದ ತಪ್ಪು ಇಟ್ಟುಕೊಂಡು ಚಾಲಕ, ನಿರ್ವಾಹಕರ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ. ಈ ಸರ್ಕಾರದ ಯೋಗ್ಯತೆಗೆ ಸಾರಿಗೆ ಇಲಾಖೆ ನೌಕರರಿಗೆ ಸಂಬಳ ಕೊಡಲು ಸಾಧ್ಯವಾಗಿಲ್ಲ. ಈ ಸರ್ಕಾರ ಎಲ್ಲಿ ಹಣವನ್ನ ಪೋಲು ಮಾಡುತ್ತಿದೆ ಎಂದು ರಾಜ್ಯದ ಜನತೆಗೆ ಗೊತ್ತಿಲ್ವಾ? ಎಂದು ಕಿಡಿಕಾರಿದ್ರು.
ನೈಟ್ ಕರ್ಫ್ಯೂ ಮಾಡಿದ್ರಿಂದ ಕೊರೊನಾ ಕಡಿಮೆ ಆಗುತ್ತಾ? ರಾತ್ರಿ ವೇಳೆ ಶೇ 80ರಷ್ಟು ಜನ ಮನೆಯಲ್ಲಿ ಇರುತ್ತಾರೆ. ಇಂತಹ ಸಮಯದಲ್ಲಿ ಕರ್ಫ್ಯೂ ಮಾಡಿದ್ರೆ ಏನು ಪ್ರಯೋಜನ?. ಕೊರೊನಾ ಹೆಚ್ಚಾಗುತ್ತಿರುವ ಸಮಯದಲ್ಲಿ ನಗರಸಭೆ ಚುನಾವಣೆ ಉಪಚುನಾವಣೆ ನಡೆಸುತ್ತೀರಿ. ಇಂತಹ ಸಮಯದಲ್ಲಿ ಸರ್ಕಾರಕ್ಕೆ ಚುನಾವಣೆ ಅವಶ್ಯಕತೆ ಇತ್ತಾ? ಚುನಾವಣೆ ಮಾಡಿಲ್ಲಾ ಅಂದಿದ್ರೆ ಏನ್ ಪ್ರಪಂಚ ಮುಳುಗಿ ಹೋಗುತಿತ್ತಾ? ಎಂದು ಹೆಚ್ಡಿಕೆ ಪ್ರಶ್ನಿಸಿದರು.
ಓದಿ:ರೈತರ ಬಗ್ಗೆ ಮೃದುವಾಗಿ ಮಾತನಾಡುತ್ತಲೇ ರೈತರ ಬೆನ್ನಿಗೆ ಬಿಜೆಪಿ ಸರ್ಕಾರ ಚೂರಿ ಹಾಕುತ್ತಿದೆ: ಹೆಚ್ಡಿಕೆ ಕಿಡಿ