ರಾಮನಗರ:ನಾನು ಇಲ್ಲಿಗೆ ಅಭಿನಂದನೆ ಮಾಡಿಸಿಕೊಳ್ಳುವುದಕ್ಕಿಂತ, ನಿಮಗೆ ಅಭಿನಂದನೆ ತಿಳಿಸಲು ಬಂದಿದ್ದೇನೆ. ನೀವು ಶಕ್ತಿ ತುಂಬಿದ್ದಕ್ಕೆ ಉಪಕಾರ ಸ್ಮರಿಸಿ ನಿಮ್ಮ ಸೇವೆಗೆ ಸಿದ್ಧ ಎಂದು ತಿಳಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.
ರಾಮನಗರ ಜಿಲ್ಲೆ ಕನಕಪುರ ಕ್ಷೇತ್ರದ ಕಬ್ಬಾಳು, ಸಾತನೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, ರಾಜ್ಯದ ಇತಿಹಾಸದಲ್ಲಿ 1,23,000 ಮತಗಳ ಅಂತರದ ದಾಖಲೆಯ ಗೆಲುವನ್ನು ನೀವು ನನಗೆ ಕೊಟ್ಟಿದ್ದೀರಿ. ನನ್ನ ಕಟ್ಟಿಹಾಕಲು ಬಿಜೆಪಿಯವರು ಚಕ್ರವರ್ತಿ ಅಶೋಕ್ ಅವರನ್ನು ನನ್ನ ವಿರುದ್ಧ ನಿಲ್ಲಿಸಿದ್ದರು. ನಾನು ನಾಮಪತ್ರ ಸಲ್ಲಿಸಿ, ನಂತರ ಕೊನೆ ದಿನ ಅರ್ಧಗಂಟೆ ಮಾತ್ರ ಪ್ರಚಾರ ಮಾಡಿದೆ. ನೀವೇ ಈ ಚುನಾವಣೆ ಮಾಡಿ ನನ್ನನ್ನು ಗೆಲ್ಲಿಸಿದ್ದೀರಿ. ಕ್ಷೇತ್ರದಲ್ಲಿ ಕೆರೆ ತುಂಬಿಸುವುದು, ರಸ್ತೆ ಅಗಲೀಕರಣ, ಪ್ರತಿ ಊರಿಗೆ ಕಾವೇರಿ ನೀರು ತಂದಿದ್ದೇನೆ. ನಿವೇಶನ, ಮನೆಗಳ ನಿರ್ಮಾಣದ ಕೆಲಸ ಮಾಡಿದ್ದೇವೆ.
ನಿಮ್ಮ ತೀರ್ಪಿಗೆ ಇಡೀ ರಾಜ್ಯದ ಜನ ಸಂತೋಷ ಪಟ್ಟಿದ್ದಾರೆ. ಪಕ್ಷಬೇಧ ಮರೆತು ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಇಲ್ಲಿನ ಕಬ್ಬಾಳಮ್ಮ ದೇವಾಲಯ ಹೇಗಿತ್ತು, ಈಗ ಹೇಗೆ ಅಭಿವೃದ್ಧಿಯಾಗಿದೆ. ಇಲ್ಲಿ ಅಡುಗೆ ಮಾಡುವವರು, ಹೂ ಮಾರುವವರು, ಪಾರ್ಟಿ ಹಾಲ್ ನಿರ್ಮಾಣ ಮಾಡಿರುವವರು ಸೇರಿದಂತೆ ಇದರಿಂದ ಎಷ್ಟು ಜನ ಬದುಕು ಕಟ್ಟಿಕೊಂಡಿದ್ದಾರೆ ಎಂದು ನೀವು ಆವಲೋಕನ ಮಾಡಿ ಎಂದರು.
ಈ ಭಾಗದ ಆಸ್ತಿ ಲಕ್ಷಗಳಿಂದ ಕೋಟಿಗೆ ಏರಿಕೆಯಾಗುವಂತೆ ಮಾಡಿದ್ದೇವೆ. ಈ ಭಾಗದ ಅಭಿವೃದ್ಧಿಯಲ್ಲಿ ನಾನಾಗಲಿ, ಸಹೋದರ ಸುರೇಶ್ ಆಗಲಿ ಲಂಚ ತಿಂದಿಲ್ಲ. ನಾನು ಚುನಾವಣೆಗೂ ಮುನ್ನ ಕೊಟ್ಟ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಗೃಹ ಜ್ಯೋತಿ ಯೋಜನೆ ಮೂಲಕ ಜುಲೈ 1 ರಿಂದ ನೀವು ಇದುವರೆಗೂ ಬಳಸುತ್ತಿದ್ದಷ್ಟು ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು. ಆ ಮೂಲಕ ಕನಕಪುರ ಕ್ಷೇತ್ರದ ಶೇ.98ರಷ್ಟು ಮಂದಿ ವಿದ್ಯುತ್ ಬಿಲ್ ಕಟ್ಟುವಂತಿಲ್ಲ ಎಂದು ಹೇಳಿದರು.