ರಾಯಚೂರು: ಸರ್ಕಾರದ ಪ್ರಮುಖ ನೀರಾವರಿ ಯೋಜನೆಗಳು ಕಾಮಗಾರಿ ಗುಣಮಟ್ಟ ಕಾಪಾಡಿ ಯೋಜನೆಯನ್ನ ಸಾಕಾರಗೊಳಿಸುವ ಕೆಲಸವಾಗಬೇಕು. ನೂರಾರು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯಲ್ಲಿ ಬೇಕಾಬಿಟ್ಟಿ ಕೆಲಸ ಮಾಡಿಸಿ ಯೋಜನೆ ಹೆಸರಿನಲ್ಲಿ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಎನ್ಆರ್ಬಿಸಿ ಯೋಜನೆ ಕಳಪೆ ಕಾಮಗಾರಿ ಆರೋಪ ತುಂಗಭದ್ರಾ, ಕೃಷ್ಣ ನದಿಗಳೆರಡು ರಾಯಚೂರು ಜಿಲ್ಲೆಯ ಜೀವನದಿಗಳು. ಈ ನದಿಯ ನೀರನ್ನ ನಂಬಿಕೊಂಡು ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಸಾವಿರಾರು ರೈತರು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪ್ರಮುಖವಾಗಿ ಬಲ ಭಾಗದಲ್ಲಿ ಹರಿಯುತ್ತಿರುವ ಕೃಷ್ಣ ನದಿಯ ನೀರು ಜಿಲ್ಲೆಯ ರೈತರಿಗೆ ಬಳಕೆಯಾಗಲಿ ಎಂದು ನಾರಾಯಣಪುರ ಬಲದಂಡೆ ಯೋಜನೆಯನ್ನ ಆಧುನೀಕರಣ ಮಾಡುವುದಕ್ಕಾಗಿ 0-95 ಕಿಲೋ ಮೀಟರ್ ಕಾಮಗಾರಿ ನಿರ್ಮಾಣಕ್ಕೆ ಸರ್ಕಾರದಿಂದ ಚಾಲನೆ ನೀಡಲಾಗಿತ್ತು. ಇದೀಗ ನಡೆಯುತ್ತಿರುವ ಕಾಮಗಾರಿ ಕಳಪೆಯಾಗಿದೆ ಎಂದು ರೈತ ಮುಖಂಡರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
1994ರಲ್ಲಿ ಅಂದು ಪ್ರಧಾನಿಯಾಗಿದ್ದ ಹೆಚ್.ಡಿ. ದೇವಗೌಡ ನಾರಾಯಣಪುರ ಬಲದಂಡೆ ನಾಲೆ ಯೋಜನೆಗೆ ಚಾಲನೆ ನೀಡಿದ್ರು. ಇದೇ ಕಾಲುವೆಯನ್ನ ಇದೀಗ 95 ಕಿಲೋ ಮೀಟರ್ ವರೆಗೆ ಆಧುನೀಕರಣ ಮಾಡಲು ಸರ್ಕಾರ ತಿರ್ಮಾನಿಸಿ, ಸಿದ್ದರಾಮಯ್ಯ ಸರ್ಕಾರ 725 ಕೋಟಿ ರೂಪಾಯಿ ಮಂಜೂರು ಮಾಡುವ ಮೂಲಕ ಆಡಳಿತಾತ್ಮಕ ಒಪ್ಪಿಗೆ ನೀಡಿತ್ತು. ಇದಾದ ಬಳಿಕ ಬಂದ ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾಮಗಾರಿ ವೆಚ್ಚವನ್ನ 850 ಕೋಟಿ ರೂಪಾಯಿ ಪರಿಷ್ಕೃತ ಅಂದಾಜನ್ನ ಏರಿಕೆ ಮಾಡಲಾಯಿತು. ಆದ್ರೆ ಮೈತ್ರಿ ಸರ್ಕಾರ ಪತನ ಬಳಿಕ ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರ ಈ ಕಾಮಗಾರಿ ವೆಚ್ಚವನ್ನ 900 ಕೋಟಿ ರೂಪಾಯಿಗೆ ಹೆಚ್ಚಿಸಿತು. ಯೋಜನೆಯ ರೂಪುರೇಷೆಯಂತೆ ಗುಣಮಟ್ಟವನ್ನ ಕಾಯ್ದುಕೊಳ್ಳುವ ಕಾಮಗಾರಿ ನಡೆಸಬೇಕು. ಆದ್ರೆ ಅದ್ಯಾವುದನ್ನು ಪಾಲನೆ ಮಾಡದೇ ಬೇಕಾಬಿಟ್ಟಿ ನಿರ್ಮಾಣ ಹಂತದಲ್ಲಿ ಕಳಪೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ರೈತ ಸಂಘದ ಮುಖಂಡ ಚಾಮರಸ ಮಾಲೀಪಾಟೀಲ್ ಆರೋಪಿಸಿದ್ದಾರೆ.
ಈ ನಾಲೆ ಯೋಜನೆಯಲ್ಲಿ ಎರಡು ಬದಿಯಲ್ಲಿ ದಂಡೆ ನಿರ್ಮಾಣ ಮಾಡಬೇಕು. 95 ಕಿಲೋ ಮೀಟರ್ವರೆಗೆ ಇದೇ ರೀತಿಯಾಗಿ ಮಾಡಬೇಕಿದೆ. ಆದ್ರೆ ಕೇವಲ 50 ಕಿ.ಮೀ ಕೆಲಸ ಮಾಡಲಾಗಿದ್ದು, ಉಳಿದ ಕಡೆ ನಿರ್ಮಾಣ ಮಾಡುತ್ತಿಲ್ಲ. ಕೆಲವು ಭಾಗಗಳಲ್ಲಿ ಮಾತ್ರ ಕೆಲಸ ಮಾಡಿ ಉಳಿದಂತೆ ತರಾತುರಿ ಕೆಲಸವನ್ನ ಮಾಡಲಾಗುತ್ತಿದೆ. ಇದರಿಂದ ಜಿಲ್ಲೆಯ ಪ್ರಮುಖ ನೀರಾವರಿ ಯೋಜನೆ ಹಳ್ಳ ಹಿಡಿಯುವ ಸಾಧ್ಯತೆಯಿದೆ. ಇಷ್ಟು ಕಳಪೆ ಕಾಮಗಾರಿ ನಡೆಯುತ್ತಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಕೈಕಟ್ಟಿ ಕುಳಿತುಕೊಂಡಿದ್ದು, ಜನಪ್ರತಿನಿಧಿಗಳು ತುಟ್ಟಿ ಬಿಚ್ಚುತ್ತಿಲ್ಲ ಎಂದು ಮಾಲಿಪಾಟೀಲ್ ವಾಗ್ದಾಳಿ ನಡೆಸಿದರು.