ರಾಯಚೂರು: ಬಿಸಿಲನಾಡು ರಾಯಚೂರು ಜಿಲ್ಲೆಯ ಜೆಡಿಎಸ್ ಹಾಗೂ ಬಿಜೆಪಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಇಂದು ನಾಮಪತ್ರವನ್ನು ಸಲ್ಲಿಸಿದ್ದಾರೆ. ರಾಯಚೂರು ಗ್ರಾಮೀಣ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್, ಮಾನ್ವಿ ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೆಂಕಟಪ್ಪ ನಾಯಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಜಿ ಹಂಪಯ್ಯ ನಾಯಕ ತಮ್ಮ ಉಮೇದುವಾರಿಕೆಯನ್ನು ಸಲ್ಲಿಕೆ ಮಾಡಿದ್ದಾರೆ.
ತಿಪ್ಪರಾಜ್ ಹವಾಲ್ದಾರ್ ಅವರು ಪಕ್ಷದ ಮುಖಂಡರು, ಕಾರ್ಯಕರ್ತರು, ಬೆಂಬಲಿಗರೊಂದಿಗೆ ನಗರದ ತಹಶಿಲ್ದಾರ್ ಕಚೇರಿಗೆ ತೆರಳಿ ನಂತರ ನಾಮಪತ್ರ ಸಲ್ಲಿಕೆಗೆ ತಮ್ಮ ಕುಟುಂಬದೊಂದಿಗೆ ಕ್ಷೇತ್ರ ಚುನಾವಣಾಧಿಕಾರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ನಂತರ ಸುದ್ದಿಗರಾರೊಂದಿಗೆ ಮಾತನಾಡಿ ಅವರು, "ಗ್ರಾಮೀಣ ಕ್ಷೇತ್ರದ ಜನತೆ ಈಗಾಗಲೇ ನನ್ನನ್ನು ಒಂದು ಬಾರಿ ಆಯ್ಕೆ ಮಾಡಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಪರಾಜಿತಗೊಂಡಿದ್ದೆ. ಈಗ ಮತ್ತೊಮ್ಮೆ ಪಕ್ಷ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಜನರು ಸಹ ಬದಲಾವಣೆ ಬಯಸಿದ್ದು, ಈ ಬಾರಿ ಗ್ರಾಮೀಣ ಕ್ಷೇತ್ರದ ಜನರು ನನ್ನನ್ನು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ" ಎಂದು ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸುವುದಾಗಿ ತಿಳಿಸಿದರು.
ಮಾನವಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ, ತಮ್ಮ ಪಕ್ಷದ ನಾಯಕರು, ಕಾರ್ಯಕರ್ತರು, ಬೆಂಬಲಿಗರು, ಹಿತೈಷಿಗಳು ಮತ್ತು ಮಗಳೊಂದಿಗೆತ ಪಟ್ಟಣದ ತಹಶೀಲ್ದಾರ್ ಕಚೇರಿಗೆ ತೆರಳಿ ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿದರು. ವಿಶೇಷ ಅಂದರೆ ಮಗಳೊಟ್ಟಿಗೆ ನಾಮಪತ್ರ ಸಲ್ಲಿಸುವುದು ಗಮನ ಸೆಳೆಯಿತು.
ಕಾಂಗ್ರೆಸ್ ಅಭ್ಯರ್ಥಿ ಜಿ.ಹಂಪಯ್ಯ ನಾಯಕ ಇಂದು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ನಗರದ ತಹಶೀಲ್ದಾರ್ ಕಚೇರಿಗೆ ತಮ್ಮ ಬೆಂಗಲಿಗರು, ಹಾಗೂ ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ತೆರಳಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಈ ಮೂಲಕ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಚುನಾವಣೆ ಅಖಾಡವನ್ನು ರಂಗೇರಿಸಿದ್ದಾರೆ.