ರಾಯಚೂರು: ಬಿಸಿಲೂರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕು ಐತಿಹಾಸಿಕ ಸ್ಥಳವೆಂಬ ಖ್ಯಾತಿ ಹೊಂದಿದೆ. ಆದರೆ ಈ ತಾಲೂಕು ಕೇಂದ್ರ ಹೆಸರಿಗಷ್ಟೇ ಸೀಮಿತವಾಗಿದ್ದು, ಅಭಿವೃದ್ಧಿ ಕುಂಠಿತವಾಗಿದೆ ಎನ್ನುವ ಆರೋಪಗಳು ಈ ಭಾಗದಲ್ಲಿ ಕೇಳಿಬರುತ್ತಿವೆ.
ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಖಾಡ ಈಗ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಆಡಳಿತ ಪಕ್ಷ ಅಭಿವೃದ್ಧಿಗಾಗಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಪ್ರಚಾರ ನಡೆಸುತ್ತಿದ್ದಾರೆ. ಪ್ರತಿಪಕ್ಷದವರು ತಮ್ಮ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನ ಪರಿಗಣಿಸಿ ಕಾಂಗ್ರೆಸ್ ಬೆಂಬಲಿಸುವಂತೆ ಪ್ರಚಾರ ನಡೆಸುತ್ತಿದ್ದಾರೆ. ಆದ್ರೆ ವಾಸ್ತವದಲ್ಲಿ ಮಸ್ಕಿ ತಾಲೂಕು ಕೇಂದ್ರವಾಗಿ ಘೋಷಣೆಯಾದ ಬಳಿಕ ತಾಲೂಕಾಡಳಿತ ಪ್ರದೇಶ ಅಭಿವೃದ್ಧಿ ಹೊಂದಿಲ್ಲ ಎನ್ನಲಾಗುತ್ತಿದೆ.
2018 ರಲ್ಲಿ ಮಸ್ಕಿಯನ್ನು ತಾಲೂಕು ಆಗಿ ಘೋಷಣೆ ಮಾಡಲಾಯಿತು. ತಾಲೂಕು ಕೇಂದ್ರ ಘೋಷಣೆಯಾದ ಬಳಿಕ ಅಗತ್ಯಕ್ಕೆ ತಕ್ಕಂತ ಅನುದಾನವನ್ನ ಸರ್ಕಾರ ನೀಡಿಲ್ಲ. ಜೊತೆಗೆ ತಾಲೂಕು ಕೇಂದ್ರಾಡಳಿತ ಪ್ರದೇಶದಲ್ಲಿ ಸೂಕ್ತವಾದ ತಹಶೀಲ್ದಾರ್ ಕಚೇರಿಯನ್ನು ನಿರ್ಮಿಸಿಲ್ಲ. ಅಗತ್ಯ ಸೌಲಭ್ಯಗಳನ್ನ ಕಲ್ಪಿಸಿಲ್ಲ. ಹೀಗಾಗಿ ಕ್ಷೇತ್ರದ ಜನತೆ ತಾಲೂಕು ಕೇಂದ್ರ ನಾಮಕಾವಾಸ್ತೆಗೆ ಮಾತ್ರ ಸೀಮಿತವಾಗಿದೆ ಎಂದು ಆರೋಪಿಸಿದ್ದಾರೆ.
ಮಸ್ಕಿ ಐತಿಹಾಸಿಕ ಹಿನ್ನೆಲೆಯುಳ್ಳ ಕ್ಷೇತ್ರವಾಗಿದ್ದು, ಮೌರ್ಯ ಚಕ್ರವರ್ತಿ ಅಶೋಕನ ಶಾಸನವಿರುವ ಸ್ಥಳವೆಂದು ಹೆಗ್ಗುರುತು ಪಡೆದುಕೊಂಡಿದೆ. ಆದ್ರೆ ಈ ಶಾಸನವಿರುವ ಸ್ಥಳವನ್ನು ಅಭಿವೃದ್ಧಿ ಮಾಡದೆ ಗಡೆಗಣಿಸಲಾಗಿದೆ. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಬೇಕಿದೆ. ಕುಡಿಯುವ ನೀರು, ರಸ್ತೆಗಳು, ಚರಂಡಿ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯವನ್ನು ಅನೇಕ ಗ್ರಾಮಗಳಿಗೆ ಇನ್ನೂ ಕಲ್ಪಿಸಿಕೊಟ್ಟಿಲ್ಲ.
ಆದ್ರೆ ಇದೀಗ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್, ಬಿಜೆಪಿಯವರು ತಮ್ಮ ಅಧಿಕಾರಾವಾಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಾಂತರ ರೂ. ಅನುದಾನ ನೀಡುವುದಾಗಿ ಹೇಳುತ್ತಿವೆ. ಪ್ರತಿ ಬಾರಿ ಚುನಾವಣೆಯಲ್ಲಿ ಇಂತಹ ಆಶ್ವಾಸನೆಗಳನ್ನು ನೀಡಲಾಗುತ್ತಿದೆ. ಆದರೆ ಯಾವುದನ್ನು ಈಡೇರಿಸಿಲ್ಲ ಎನ್ನುವುದು ಸ್ಥಳೀಯರ ಮಾತಾಗಿದೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನ ಹರಿಸಿದ ಪಕ್ಷಗಳಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ತಾಲೂಕಿನ ಜನ ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಏಪ್ರಿಲ್ 17 ರಂದು ಮಸ್ಕಿ ಉಪಚುನಾವಣೆ ನಡೆಯಲಿದೆ. ಕಾಂಗ್ರೆಸ್ನಿಂದ ಬಸನಗೌಡ ತುರವಿಹಾಳ, ಬಿಜೆಪಿಯಿಂದ ಪ್ರತಾಪ್ಗೌಡ ಪಾಟೀಲ್ ಸ್ಪರ್ಧಿಸಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಇದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ.