ರಾಯಚೂರು: ಹೆಚ್.ವಿಶ್ವನಾಥ್ ಹಾಗೂ ಸಿದ್ದರಾಮಯ್ಯ ಅವರಿಗೆ ಯಾವ ಪಕ್ಷದಲ್ಲಿರಬೇಕೆಂದೇನಿಲ್ಲ, ಅವರಿಗೆ ಅಧಿಕಾರದಲ್ಲಿ ಇರಬೇಕು ಎನ್ನುವುದೊಂದೇ ಮುಖ್ಯ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ. ಹೆಚ್.ವಿಶ್ವನಾಥ್ ಬಿಜೆಪಿ ತೊರೆಯುವ ವಿಚಾರಕ್ಕೆ ನಗರದಲ್ಲಿಂದ ಪ್ರತಿಕ್ರಿಯಿಸಿದ ಅವರು, ಹೆಚ್.ವಿಶ್ವನಾಥ್ ಮತ್ತು ಸಿದ್ದರಾಮಯ್ಯರಿಗೆ ಯಾವ ಪಕ್ಷದಲ್ಲಿರಬೇಕು ಎಂದು ಇಲ್ಲ ಅವರಿಗೆ ಅಧಿಕಾರ ಮುಖ್ಯ. ಆದರೇ, ನಮ್ಮದು ಹಾಗಲ್ಲ. ನಮ್ಮ ಪಕ್ಷ ನನ್ನ ತಾಯಿ ಇದ್ದಂತೆ, ತಾಯಿಗೆ ಜೀವನದಲ್ಲಿ ದ್ರೋಹ ಮಾಡಿಲ್ಲ ಎಂದರು. ನಮಗೆ ಪಕ್ಷ ಒಂದು ಸಂಸ್ಕಾರ ನೀಡಿದೆ, ಆ ಸಂಸ್ಕಾರದಂತೆ ನಡೆದುಕೊಳ್ಳುತ್ತೇವೆ ಎಂದರು.
ಸಂಘಟನೆ, ದೇಶವನ್ನು ಅಭಿವೃದ್ಧಿ ಪಡಿಸಬೇಕು, ಧರ್ಮವನ್ನು ರಕ್ಷಣೆ ಮಾಡಬೇಕು ಎನ್ನುವ ಸಂಸ್ಕಾರ ನಮಗೆ ನೀಡಿದೆ ಅದರಂತೆ ನಡೆದುಕೊಳ್ಳುತ್ತೇವೆ. ಅದರೆ, ಸಿದ್ದರಾಮಯ್ಯ, ವಿಶ್ವನಾಥ್ ಅವರಿಗೆ ಅಧಿಕಾರ ಬೇಕು ಎನ್ನುವುದು ಅವರ ಸಂಸ್ಕಾರವಾಗಿದೆ ಎಂದು ಕೆ ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡಲಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೊದಲು ಅವರು ಸ್ಪರ್ಧೆ ಮಾಡಲಿ. ನಿಜವಾದ ಜನನಾಯಕ ತಾವು ಸ್ಪರ್ಧೆ ಮಾಡುವ ಕ್ಷೇತ್ರ ಅಭಿವೃದ್ಧಿ ಮಾಡಿ ಚುನಾವಣೆಗೆ ಹೋಗಬೇಕು ಹೊರತು ಕ್ಷೇತ್ರಗಳನ್ನು ಬದಲಿಸುವುದು ನಾಯಕನ ಲಕ್ಷಣವಲ್ಲ ಎಂದು ಈಶ್ವರಪ್ಪ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಅವರಿಗೆ ಸೋಲುವ ಭೀತಿ ಎದುರಾಗಿದೆ: ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಿ ಸೋತರು. ನಂತರ ಬಾದಾಮಿ ಕ್ಷೇತ್ರಕ್ಕೆ ಹೋಗಿ ಅಲ್ಲಿ ಗೆದ್ದರು. ಆದರೇ ಈಗ ಅಲ್ಲಿಯೂ ಸಿದ್ದರಾಮಯ್ಯ ಅವರಿಗೆ ಸೋಲುವ ಭೀತಿ ಎದುರಾಗಿದೆ. ಹೀಗಾಗಿ ಕೋಲಾರಕ್ಕೆ ಹೋಗುತ್ತಿದ್ದಾರೆ. ಆದರೆ ಅವರದೇ ಪಕ್ಷದ ನಾಯಕ ಡಿಕೆ ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಸ್ಫರ್ಧಿಸುವ ಕ್ಷೇತ್ರದ ಬಗ್ಗೆ ಕೇಳಿದರೆ ನನಗೆ ಗೊತ್ತಿಲ್ಲ ಎನ್ನುತ್ತಾರೆ. ಸಿದ್ದರಾಮಯ್ಯ, ಡಿಕೆಶಿ ನಡುವೆಯೇ ಜಗಳಗಳಿವೆ. ಹೀಗಾದರೆ ಅವರು ಅಧಿಕಾರಕ್ಕೆ ಬರುವುದಿರಲಿ ವಿರೋಧ ಪಕ್ಷದಲ್ಲೂ ಕೂಡೋ ಸ್ಥಿತಿಯಲ್ಲಿಲ್ಲ. ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂದಾದಲ್ಲಿ ಒಂದು ವಿರೋಧ ಪಕ್ಷ ಇರಬೇಕೆ. ವಿರೋಧ ಪಕ್ಷದ ಸ್ಥಾನದಲ್ಲಾದರು ಇರವಂತೆ ಕಾಂಗ್ರೆಸ್ ಪ್ರಯತ್ನ ನಡೆಸಲಿ ಎಂದರು.