ರಾಯಚೂರು: ಕನ್ನಡ ಚಿತ್ರರಂಗದಲ್ಲೀಗ 'ಕಾಟೇರ'ನದ್ದೇ ಸದ್ದು. ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಟೇರನಿಗೆ ಪೈರಸಿ ಕಾಟ ಶುರುವಾಗಿದೆ. ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಈ ಸಿನಿಮಾವನ್ನು ಪೈರಸಿ ಮಾಡಿದ ಆರೋಪಿ ವಿರುದ್ಧ ರಾಯಚೂರಿನ ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವದುರ್ಗ ತಾಲೂಕಿನ ಗಂಗಾನಾಯಕ ತಾಂಡದ ಯುವಕ ಮೌನೇಶ್ ಬಂಧಿತ ಆರೋಪಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಪೈರಸಿ ಮಾಡಿರುವ ಆರೋಪ ಈತನ ಮೇಲಿದೆ.
ಅನುಮಾನದ ಹಿನ್ನೆಲೆ ದೂರುದಾರರು ಪೈರಸಿ ಮಾಡುತ್ತಿದ್ದ ಮೌನೇಶ್ ಜೊತೆ ಸಿನಿಮೀಯ ರೀತಿಯಲ್ಲಿ ಚಾಟ್ ಮಾಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಮೌನೇಶನು ವಾಟ್ಸಪ್ನಲ್ಲಿ ಅವರೊಂದಿಗೆ (ದೂರುದಾರ) ಚಾಟ್ ಮಾಡುತ್ತಲೇ 40 ರೂ.ಗೆ ಕಾಟೇರ ಹಾಗೂ ಮತ್ತೊಂದು ಹೊಸ ಸಿನಿಮಾ ಇದೆ, ಈ ಸಿನಿಮಾದ ಲಿಂಕ್ ಶೇರ್ ಮಾಡಲು ಫೋನ್ಪೇ ಮೂಲಕ ತನಗೆ ಹಣ ಕಳಿಸುವಂತೆ ತಿಳಿಸಿದ್ದನು. ಆ ಪ್ರಕಾರ ದೂರುದಾರರು ಆತನಿಗೆ 40 ರೂ. ಹಾಕಿದಾಗ ಮೌನೇಶನು ಟೆಲಿಗ್ರಾಮ್ನಲ್ಲಿ ಕಾಟೇರ ಚಿತ್ರದ ಲಿಂಕ್ ಕಳಿಸಿದ್ದನು.
''ಮೌನೇಶ್ ಎಂಬಾತ ಮೋಸ ಮಾಡುವ ಉದ್ದೇಶದಿಂದ ಹಣ ಪಡೆದು ಕನ್ನಡದ ಕಾಟೇರ ಚಿತ್ರವನ್ನು ಟೆಲಿಗ್ರಾಂ ಆ್ಯಪ್ ಮೂಲಕ ಕಳಿಸಿರುವುದು ಕಂಡು ಬಂದಿದೆ. ಈ ಪ್ರಕರಣದಲ್ಲಿ ಈತನೊಂದಿಗೆ ಹಲವರು ಸೇರಿಕೊಂಡಿರುವ ಅನುಮಾನ ಇದೆ. ಪೈರಸಿ ಕೃತ್ಯದಿಂದ ಸಿನಿಮಾದ ನಿರ್ಮಾಪಕರಿಗೆ ಹಾಗೂ ಹಂಚಿಕೆದಾರರಿಗೆ ಆರ್ಥಿಕ ನಷ್ಟವಾಗುತ್ತಿದೆ. ಹಾಗಾಗಿ ಪೈರಸಿಯಲ್ಲಿ ತೊಡಗಿರುವ ಆರೋಪಿಗಳನ್ನು ಬಂಧಿಸುವಂತೆ ಹಾಗೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ'' ದೂರುದಾರರು ಮನವಿ ಮಾಡಿಕೊಂಡಿದ್ದಾರೆ.
ಈ ಲಿಂಕ್ ಶೇರ್ ಮಾಡುತ್ತಿದ್ದ ಯುವಕನ ವಿರುದ್ಧ ಸದ್ಯ ಪ್ರಕರಣ ದಾಖಲಿಸಲಾಗಿದೆ. ಇದರ ಕಿಂಗ್ ಪಿನ್ ಉಪೇಂದ್ರ ಎನ್ನುವವನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ 'ಕಾಟೇರ' ಚಿತ್ರದ ಡಿಸ್ಟ್ರಿಬ್ಯೂಟರ್‌ಗಳಾದ ಗುರುದೇಶಪಾಂಡೆ ಹಾಗೂ ಜಗದೀಶ್ ಅವರಿಗೆ ಆರ್ಥಿಕ ನಷ್ಟವಾಗಿದೆ. ಡಿಸ್ಟ್ರಿಬ್ಯೂಟರ್ ಹಾಗೂ ನಿರ್ಮಾಪಕರ ಸೂಚನೆ ಮೇರೆಗೆ ವಾದಿರಾಜ ಎಂಬುವವರಿಂದ ಸದರ್ ಬಜಾರ್ ಠಾಣೆಯಲ್ಲಿ ಈಗಾಗಲೇ ದೂರು ದಾಖಲಿಸಲಾಗಿದೆ. ವಾಟ್ಸ್ಆ್ಯಪ್ ಚಾಟ್ ಬಳಿಕ 40 ರೂ. ಫೋನ್ ಪೇ ಮಾಡಿ, ಸಿನಿಮಾ ಲಿಂಕ್ ಪಡೆದುಕೊಂಡ ವಾದಿರಾಜ, ಕಾಪಿರೈಟ್ ಆ್ಯಕ್ಟ್ ಹಾಗೂ ಐಪಿಸಿ 420ರ ಅಡಿ ಪ್ರಕರಣ ದಾಖಲಿಸಿದ್ದಾರೆ.