ರಾಯಚೂರು :ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎನ್ನುವ ಜನರ ಆಸೆಗೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಪ್ರಸಕ್ತ ಸಾಲಿನಿಂದ ಆರಂಭಿಸಲು ಕಾರ್ಯವನ್ನ ಚುರುಕುಗೊಳಿಸಿದೆ.
ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವಾದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯೊಳಗೊಂಡ ನೂತನ ವಿಶ್ವವಿದ್ಯಾಲಯವನ್ನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಘೋಷಣೆ ಮಾಡಿತ್ತು. ಇದನ್ನ ಈ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸುವ ಪ್ರಯತ್ನಗಳು ತೀವ್ರಗೊಂಡಿವೆ. ನೂತನ ವಿವಿ ವ್ಯಾಪ್ತಿಗೆ ಕಾಲೇಜುಗಳ ವಿಭಜನೆ ಹಾಗೂ ಆಸ್ತಿ ಹಸ್ತಾಂತರದ ಪ್ರಕ್ರಿಯೆಗಳು ಚುರುಕಾಗಿ ನಡೆಯುತ್ತಿವೆ.
2017ರಲ್ಲಿ ಅವಧಿಯಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ತಮ್ಮ ಆಯವ್ಯಯ ಮಂಡನೆ ಮಾಡುವಾಗ ರಾಯಚೂರು, ಯಾದಗಿರಿ ಜಿಲ್ಲೆಗಳನ್ನು ಒಳಗೊಂಡಂತೆ ಗುಲ್ಬರ್ಗ ವಿವಿಯಿಂದ ಬೇರ್ಪಡಿಸಿ ನೂತನ ರಾಯಚೂರು ವಿವಿ ಸ್ಥಾಪನೆ ಘೋಷಣೆ ಮಾಡಿದ್ದರು. ಅಲ್ಲದೆ ನೂತನ ವಿವಿ ಆರಂಭಿಸುವ ಪ್ರಕ್ರಿಯೆಗಾಗಿ ವಿಶೇಷಾಧಿಕಾರಿಯನ್ನಾಗಿ ಪ್ರೊ.ಮುಜಾರ್ ಅಸಾದಿಯನ್ನು ನೇಮಕಗೊಳಿಸಿದ್ದರು. ಆದರೆ, ವಿವಿ ತಿದ್ದುಪಡಿ ಕಾಯ್ದೆಯನ್ನು ಸೇರಿಸದ ಪರಿಣಾಮ ವಿವಿ ಸ್ಥಾಪನೆ ಕಾರ್ಯ ನೆನೆಗುದಿಗೆ ಬೀಳುವಂತಾಯಿತ್ತು.
ಇದಾದ ಬಳಿಕ 2018ರಲ್ಲಿ ಸಚಿವ ಸಂಪುಟ ಸಭೆಯಲ್ಲಿ ಸುಗ್ರಿವಾಜ್ಞೆ ಮೂಲಕ ವಿವಿ ಪ್ರಾರಂಭಿಸಲು ರಾಜ್ಯಪಾಲರ ಅಂಕಿತಕ್ಕೆ ರವಾನಿಸಲಾಗಿತ್ತು. ಆದರೆ, ರಾಜ್ಯಪಾಲರು ವಿವಿ ಸ್ಥಾಪನೆಗೆ ಇಷ್ಟು ಆತುರವೇಕೆ ಎಂದು ಪ್ರಶ್ನಿಸಿ ಅಂಕಿತ ಹಾಕದೆ ಇದ್ದದ್ದು ವಿವಿ ಆರಂಭ ವಿಳಂಬಕ್ಕೆ ಕಾರಣವಾಗಿತ್ತು. ಇದೀಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಸ್ತಿತ್ವಕ್ಕೆ ಬಂದ ಬಳಿಕ ಫೆಬ್ರವರಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಮಾರ್ಚ್ ತಿಂಗಳ ಸದನಲ್ಲಿ ಒಪ್ಪಿಗೆ ಪಡೆದು ರಾಜ್ಯಪಾಲರ ಅಂಕಿತಕ್ಕೆ ಳುಹಿಸಲಾಗಿತ್ತು. ಕೊನೆಗೂ ಏಪ್ರಿಲ್ 30ರಂದು ವಿವಿ ತಿದ್ದುಪಡಿ ಕಾಯ್ದೆಗೆ ಅಂಕಿತ ಹಾಕಿದ ಬಳಿಕ ಮೇ 2ರಂದು ಈ ಕುರಿತಂತೆ ಅಧಿಸೂಚನೆ ಹೊರಡಿಸಲಾಯಿತು. ಈ ಮೂಲಕ ಹಲವು ದಿನಗಳ ವಿವಿ ಕನಸು ಈಡೇರಿದಂತೆ ಆಯಿತು.
ಮೊದಲಿಗೆ ನೇಮಕವಾಗಿದ್ದ ವಿಶೇಷಾಧಿಕಾರಿ ಪ್ರೊ.ಮುಜಾರ್ ಅಸಾದಿಯವರ ಬದಲಾಗಿ ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಜಿ ಕೊಟ್ರೇಶ್ವರ್ರನ್ನು ವಿಶೇಷಾಕಾರಿಯನ್ನಾಗಿ ನೇಮಿಸಲಾಯಿತು. ಇವರು ಅಧಿಕಾರ ವಹಿಸಿಕೊಂಡ ನಂತರ ನೂತನ ವಿವಿ ಸ್ಥಾಪನೆಗೆ ಬೇಕಾದ ಸಿದ್ಧತೆಗಳನ್ನು ಪೂರ್ಣಗೊಳಿಸುವ ಕೆಲಸವನ್ನು ಚುರುಕುಗೊಳಿಸಿ, ಅನುದಾನ, ಸಿಬ್ಬಂದಿ ಹಾಗೂ ಮೂಲ ಸೌಕರ್ಯಗಳ ಕುರಿತು ಸರ್ಕಾರ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ವಿವಿ ಸ್ಥಾಪನೆಗೆ ಗುರುತಿಸಲಾದ ಯರಗೇರಾ ಬಳಿಯ ಸ್ನಾತಕೋತ್ತರ ಕೇಂದ್ರಕ್ಕೆ(ಪಿಜಿ ಸೆಂಟರ್) ಅಗತ್ಯ ಸೌಕರ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದಕ್ಕೆ ಸರ್ಕಾರ ಸ್ಪಂದನೆ ಮಾಡುತ್ತಿದೆ ಎನ್ನುವ ಮಾಹಿತಿ ಸಹ ಮೂಲಗಳು ತಿಳಿಸಿವೆ. ಶೈಕ್ಷಣಿಕ ಅಭಿವೃದ್ದಿ ದೃಷ್ಠಿಯಿಂದ ಜಿಲ್ಲೆಗೆ ಘೋಷಣೆಯಾಗಿರುವ ನೂತನ ವಿಶ್ವವಿದ್ಯಾಲಯ ಆರಂಭಿಸುವ ಮೂಲಕ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತೆ ಆಗುತ್ತದೆ.