ಕರ್ನಾಟಕ

karnataka

By

Published : Jul 7, 2023, 9:56 PM IST

ETV Bharat / state

ಬಜೆಟ್​ನಲ್ಲಿ ಸಿದ್ದರಾಮಯ್ಯ ತವರು ಜಿಲ್ಲೆಗೆ ನೀಡಿದ ಕೊಡುಗೆಗಳೇನು?

ರೈತರ ಕೃಷಿ ಉತ್ಪನ್ನಗಳಿಗೆ ವಿಧಿಸಿರುವ ಜಿಎಸ್​ಟಿ ರದ್ದು ಮಾಡುವ ಬಗ್ಗೆ ಬಜೆಟ್​ನಲ್ಲಿ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಮೈಸೂರು
ಮೈಸೂರು

ಮೈಸೂರು :ಈ ಬಾರಿ ಬಜೆಟ್​ನಲ್ಲಿ ತವರು ಜಿಲ್ಲೆಗೆ ಸಿದ್ದರಾಮಯ್ಯ ನೀಡಿದ ಕೊಡುಗೆಗಳೇನು ಹಾಗೂ ನಿರೀಕ್ಷೆಗಳು ಏನೇನು ಇದ್ದವೂ ಎಂಬ ಹಿನ್ನೆಲೆಯಲ್ಲಿ ವಿವರವಾದ ಮಾಹಿತಿ ಇಲ್ಲಿದೆ. ಈ ಬಾರಿ ಹೊಸ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಅನ್ನು ಘೋಷಣೆ ಮಾಡಿದ್ದು, ಅದರಲ್ಲಿ ತವರು ಜಿಲ್ಲೆ ಮೈಸೂರಿಗೆ ಕೆಲವು ಕೊಡುಗೆಗಳನ್ನು ನೀಡಿದ್ದಾರೆ. ಜೊತೆಗೆ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಅವುಗಳನ್ನು ಈ ಬಜೆಟ್​ನಲ್ಲಿ ಘೋಷಣೆ ಮಾಡಲಾಗಿಲ್ಲ.

ತವರು ಜಿಲ್ಲೆಗೆ ಸಿದ್ದರಾಮಯ್ಯ ಕೊಡುಗೆಗಳೇನು:ಈ ಬಾರಿ ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಲ್ಲಿ ಮೈಸೂರಿಗೆ ಕೆಲವು ಕೊಡುಗೆಗಳನ್ನು ನೀಡಿದ್ದು, ಅವುಗಳಲ್ಲಿ ಪ್ರಮುಖವಾಗಿ ಕೃಷಿ ಉತ್ಪಾದಕ ಸಂಸ್ಥೆಗಳ ಉತ್ಪನ್ನಗಳನ್ನು ರಫ್ತು ಮಾಡಲು ಪೂರಕವಾಗಿ ಅಗತ್ಯವಾದ ಗೋದಾಮು, ಶೀತಲ ಗೃಹ ನಿರ್ಮಾಣ, ಇತರ ಮೂಲ ಸೌಕರ್ಯ ಕಲ್ಪಿಸಲು ಶೇ 20ರಷ್ಟು ಗರಿಷ್ಠ ಒಂದು ಕೋಟಿ ರೂಪಾಯಿ ಸಹಾಯಧನ ಘೋಷಣೆ ಮಾಡಿದ್ದು, ಮೈಸೂರಿನಲ್ಲಿ ಸುಟ್ಟ ಗಾಯಗಳ ಘಟಕವೂ ಒಳಗೊಂಡಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ.

ಜೊತೆಗೆ ಮೈಸೂರಿನಲ್ಲಿ ಟ್ರಾಮಾ ಸೆಂಟರ್ ನಿರ್ಮಾಣಕ್ಕೆ ಅನುದಾನ ನೀಡಿದ್ದು, ಮೈಸೂರಿನ ಕಿದ್ವಾಯಿ ಆಸ್ಪತ್ರೆ ಪ್ರಾದೇಶಿಕ ಘಟಕದ ಸುಧಾರಣೆಗೆ 10 ಕೋಟಿ ರೂಪಾಯಿ ನೀಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಉದ್ಯಮಿಗಳು ರಾಷ್ಟ್ರೀಕೃತ ಬ್ಯಾಂಕ್​ನಿಂದ ಪಡೆಯುವ ಎರಡು ಕೋಟಿ ರೂಪಾಯಿ ಸಾಲಕ್ಕೆ ಸರ್ಕಾರವೂ ಗ್ಯಾರಂಟಿಯಾಗಲಿದೆ.

ಇವುಗಳ ಜೊತೆಗೆ ಹಿಂದುಳಿದ ವರ್ಗಗಳ ಉದ್ಯಮಿಗಳು ಪ್ರಾರಂಭಿಸುವ ಸೇವಾ ಉದ್ಯಮಗಳಿಗೆ ಗರಿಷ್ಠ 10 ಕೋಟಿ ರೂಪಾಯಿ ವರೆಗೆ 6% ಬಡ್ಡಿ ದರದಲ್ಲಿ ಸಾಲ ಒದಗಿಸಲಾಗುತ್ತದೆ. ಯುವಶಕ್ತಿ ಯೋಜನೆ ಅನುಷ್ಠಾನದಲ್ಲಿ ಪದವೀದರರ ಭತ್ಯೆ 3000 ರೂ , ಡಿಪ್ಲೊಮೋದಾರರಿಗೆ 1500 ರೂ ಭತ್ಯೆ ಎರಡು ವರ್ಷ ಅಪ್ರೆಂಟೇಷಿಪ್ ತರಬೇತಿ ಪಡೆಯುವವರಿಗೆ ನೀಡಬಹುದಾಗಿದೆ. ಇದರಿಂದ ಅರೆ ಕೌಶಲ್ಯ ಕಾರ್ಮಿಕರಿಗೆ ಸಹಕಾರಿಯಾಗಲಿದೆ . ಕೈಗಾರಿಕಾ ಕ್ಲಸ್ಟರ್ ಸ್ಥಾಪನೆಗೆ ಪೂರಕವಾಗಿ ಸಾಮಾನ್ಯ ಸೌಲಭ್ಯ ಕೇಂದ್ರ ಕಲ್ಪಿಸಲು ಪಿಪಿಪಿ ಯೋಜನೆಯಲ್ಲಿ ಅನುಷ್ಠಾನ ಎಂಎಸ್ಎಂಇ ಉದ್ಯಮಗಳಿಗೆ ಸಹಕಾರಿ ಆಗಲಿದೆ.

10 ಅಶ್ವ ಶಕ್ತಿ ಮೋಟಾರು ಒಳಗಿನ ಮಗ್ಗ, ಮಗ್ಗ ಪೂರ್ವ ಉದ್ಯಮಗಳಿಗೆ 250 ಯೂನಿಟ್ ವಿದ್ಯುತ್ ಉಚಿತ. ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯ ಪ್ರಾಧಿಕಾರ ರಚನೆ , ದಸರಾ ವಸ್ತು ಪ್ರದರ್ಶನವನ್ನೂ ದೆಹಲಿ ಪ್ರಗತಿ ಮೈದಾನ ಮಾದರಿ ಮೇಲ್ದರ್ಜೆಗೆ ಏರಿಸಲಿದ್ದು, ಮೈಸೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿ ನಿರ್ಮಾಣಕ್ಕೂ ಈ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.

ಮೈಸೂರಿಗೆ ಸಿಗದ ಕೆಲವು ನಿರೀಕ್ಷೆಗಳು: ಈ ಬಾರಿಯ ಬಜೆಟ್‌ ಬಗ್ಗೆ ತವರು ಜಿಲ್ಲೆಯ ಜನರು ಹಲವಾರು ನಿರೀಕ್ಷೆಗಳನ್ನು ಇಟ್ಟಿದ್ದರು. ಆದರೆ, ಅವುಗಳಲ್ಲಿ ಕೆಲವು ಪ್ರಮುಖ ನಿರೀಕ್ಷೆಗಳು ಈ ಬಾರಿ ಈಡೇರಿಲ್ಲ. ಅವುಗಳನ್ನು ಬಜೆಟ್ ನಂತರವೂ ಇಲಾಖಾ ಅನುದಾನದಲ್ಲಿ ಆಗ ಮಾಡಬಹುದಾಗಿದ್ದು, ಅವುಗಳೆಂದರೆ ಕೈಗಾರಿಕೆಗಳ ನಿರೀಕ್ಷಿತ ಪ್ರಸ್ತಾವನೆಗಳು. ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ಹಿಂದಿನ ಬಜೆಟ್ ಮತ್ತು ಕೈಗಾರಿಕಾ ನೀತಿ ಪ್ರಸ್ತಾಪಿತ ಯೋಜನೆಗೆ, ಹಣ, ಅಧಿಕಾರಿಗಳು, ಸಿಬ್ಬಂದಿ ನೇಮಕದ ಪ್ರಸ್ತಾಪವಿಲ್ಲ. ರೋಗಗ್ರಸ್ತ ಕೈಗಾರಿಕಾ ಪುನಶ್ಚೇತನ ಯೋಜನೆ ರೂಪಿಸಿಲ್ಲ. ಮೈಸೂರು ರಫ್ತು ಕೇಂದ್ರಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಬಿಡುಗಡೆಯಾಗಿಲ್ಲ. ಇದರ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಯಾವುದೇ ಯೋಜನೆಯನ್ನು ಘೋಷಣೆ ಮಾಡಲಾಗಿಲ್ಲ ಎಂದು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ ಅಭಿಪ್ರಾಯಪಟ್ಟಿದ್ದಾರೆ.

ಗಣ್ಯರು ಹೇಳುವುದೇನು : ಈ ಬಜೆಟ್​ನಲ್ಲಿ ಹಲವಾರು ನಿರೀಕ್ಷೆಗಳನ್ನು ಮೈಸೂರು ಕೈಗಾರಿಕಾ ಉದ್ಯಮಿಗಳು ಇಟ್ಟಿದ್ದರು. ಆದರೆ, ಯಾವುದೇ ರೀತಿಯ ಕೈಗಾರಿಕಾ ಪೂರಕವಾದ ಯೋಜನೆಗಳನ್ನು ನೀಡಿಲ್ಲ ಹಾಗೂ ಮೈಸೂರಿಗೆ ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಮಾಡಿಲ್ಲ. ಇದೊಂದು ನಿರಾಶಾದಾಯಕ ಬಜೆಟ್ ಎಂದು ಮಾಜಿ ಕಾಂಗ್ರೆಸ್ ಶಾಸಕ ಹಾಗೂ ಮೈಸೂರು ಕೈಗಾರಿಕಾ ಸಂಘಗಳ ಅಧ್ಯಕ್ಷ ವಾಸು ಹೇಳಿಕೆ ನೀಡಿದ್ದಾರೆ.

'ಇದೊಂದು ಸ್ಪಷ್ಟತೆ ಇಲ್ಲದ ಬಜೆಟ್ ಆಗಿದ್ದು. ರೈತರಿಂದಲೇ ಅಕ್ಕಿ ಮತ್ತು ಜೋಳ ಖರೀದಿ ಮಾಡಬೇಕೆಂದು ಮನವಿ ಮಾಡಿದ್ದೆವು. ಆದರೆ ಅದರ ಬಗ್ಗೆ ಸ್ಪಷ್ಟತೆ ಇಲ್ಲ. ರೈತರ ಕೃಷಿ ಸಾಲ ನೀತಿ ಬಗ್ಗೆ ಹಾಗೂ ಕೃಷಿ ಉತ್ಪನ್ನಗಳಿಗೆ ವಿಧಿಸಿರುವ ಜಿಎಸ್​ಟಿ ರದ್ದು ಮಾಡುವ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲ' ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:Watch.. ಸಿಎಂ ಸಿದ್ದರಾಮಯ್ಯ ಬಜೆಟ್ ಬಗ್ಗೆ ಚಾಮರಾಜನಗರದ ಜನ ಹೇಳಿದ್ದೇನು?

ABOUT THE AUTHOR

...view details