ಮೈಸೂರು:ಕೊರೊನಾ ಪ್ರಕರಣಗಳು ನರಸಿಂಹರಾಜ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಭಾಗವನ್ನು ಲಾಕ್ಡೌನ್ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೈತೃತ್ವದಲ್ಲಿ ಕೋವಿಡ್-19 ನಿಯಂತ್ರಣ, ನೀರಾವರಿ, ಪ್ರಹಾವ ಪರಿಸ್ಥಿತಿ ನಿಭಾಯಿಸುವ ಸಂಬಂಧ ನಡೆದ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಅವರು, ಜಿಲ್ಲೆಯ ನರಸಿಂಹರಾಜ ಕ್ಷೇತ್ರದಲ್ಲಿ ಸ್ವಲ್ಪ ಸಮಸ್ಯೆಯಾಗುತ್ತಿದೆ. ಅಲ್ಲಿಯೇ ಶೇ. 50ರಷ್ಟು ಪ್ರಕರಣಗಳು ಕಂಡು ಬರುತ್ತಿವೆ. ಅಲ್ಲಿ ಕೊನೆ ಕ್ಷಣದವರೆಗೂ ಪರೀಕ್ಷೆಗೆ ಬಾರದೆ ಆರೋಗ್ಯ ತೀವ್ರ ಹದಗೆಟ್ಟ ಮೇಲೆ ಬರುತ್ತಿದ್ದಾರೆ. ಹೀಗಾಗಿ ಈ ಭಾಗವನ್ನು ಮಾತ್ರ ಲಾಕ್ಡೌನ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಕ್ಷೇತ್ರದ ನಾಗರಿಕರನ್ನು ಹೆಚ್ಚಿನ ರೀತಿಯಲ್ಲಿ ಪರೀಕ್ಷೆಗೊಳಪಡಿಸಿ ಪರಿಸ್ಥಿತಿ ಇನ್ನೂ ಕೈಮೀರಿ ಹೋಗದಂತೆ ಕ್ರಮ ಕೈಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು. ನೀರಾವರಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆ ಸದ್ಯದ ಪರಿಸ್ಥಿತಿಯಲ್ಲಿಲ್ಲ. ರಸಗೊಬ್ಬರದ ಕೊರತೆಯೂ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಬಿತ್ತನೆ ಪ್ರಕ್ರಿಯೆಯೂ ನಡೆಯುತ್ತಿದೆ. ಪ್ರವಾಹದಂತಹ ಪರಿಸ್ಥಿತಿ ಎದುರಾದರೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.