ಮೈಸೂರು :ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟ ಇಬ್ಬರು 10 ಮಂದಿಗೆ ಜೀವದಾನ ಮಾಡಿದ್ದಾರೆ. ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕುಮಾರ್ (43) ಹಾಗೂ ದರ್ಶನ್ (23) ಅವರನ್ನು ಕ್ರಮವಾಗಿ ನ. 26 ಹಾಗೂ 28 ರಂದು ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಇಬ್ಬರ ತಲೆಗೂ ತೀವ್ರವಾಗಿ ಪೆಟ್ಟು ಬಿದ್ದಿತ್ತು. ಆರಂಭಿಕ ಸಿಟಿ ಸ್ಕ್ಯಾನ್ನಲ್ಲಿ ಮೆದುಳಿನ ಅಂಗಾಂಶಕ್ಕೆ ಘಾಸಿಯಾಗಿದ್ದು ಕಂಡುಬಂದಿದ್ದರಿಂದ ಅವರನ್ನು ಐಸಿಯುಗೆ ಸ್ಥಳಾಂತರಿಸಿ, ಜೀವ ರಕ್ಷಣಾ ಬೆಂಬಲದಲ್ಲಿ ಇರಿಸಲಾಗಿತ್ತು.
ಕುಮಾರ್ ಹಾಗೂ ದರ್ಶನ್ ಅವರು ಗಂಭೀರ ಸ್ಥಿತಿಯಲ್ಲಿದ್ದ ಕಾರಣ, ಅವರನ್ನು ಜೀವ ರಕ್ಷಣಾ ಬೆಂಬಲದಲ್ಲಿ ಇರಿಸಲಾಗಿತ್ತು. ಕ್ರಮವಾಗಿ ನವೆಂಬರ್ 29 ರಂದು ಸಂಜೆ 7.22 ಕ್ಕೆ ಹಾಗೂ ಡಿಸೆಂಬರ್ 2 ರಂದು ಸಂಜೆ 4.45 ಕ್ಕೆ ಇಬ್ಬರ ಮೆದುಳು ನಿಷ್ಕ್ರಿಯ (ಬ್ರೈನ್ ಡೆಡ್) ಎಂದು ಘೋಷಿಸಲಾಗಿತ್ತು. 1994ರ ಮಾನವ ಅಂಗಾಂಗಗಳ ಕಸಿ ಕಾಯಿದೆ ಅನುಸಾರ ಆಸ್ಪತ್ರೆಯ ಶಿಷ್ಟಾಚಾರದಂತೆ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆ ವೈದ್ಯರ ತಂಡ ಈ ಘೋಷಣೆ ಮಾಡಿತ್ತು.
ಈ ದುರ್ಘಟನೆಗೂ ಮುನ್ನ ಈ ಇಬ್ಬರೂ ಆರೋಗ್ಯವಾಗಿಯೇ ಇದ್ದರು. ನಂತರ ಇನ್ನಷ್ಟು ಪರೀಕ್ಷೆ ನಡೆಸಿದಾಗ ಇಬ್ಬರೂ ಅಂಗಾಂಗ ದಾನಕ್ಕೆ ಯೋಗ್ಯರಾಗಿರುವುದು ಕಂಡುಬಂತು. ನಂತರ ಇಬ್ಬರ ಕುಟುಂಬದವರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು. ಅಂಗದಾನದ ಶಿಷ್ಟಾಚಾರದಂತೆ ಎಸ್ಟಿಟಿಒ ಅಧಿಕಾರಿಗಳು (ಸ್ಟೇಟ್ ಆರ್ಗನ್ ಅಂಡ್ ಟಿಶ್ಯೂ ಟ್ರಾನ್ಸ್ಪ್ಲಾಂಟ್ ಆರ್ಗನೈಸೇಶನ್) (ಹಿಂದಿನ ಹೆಸರು ಜೀವ ಸಾರ್ಥಕತೆ) ಅಂಗ ಸ್ವೀಕರಿಸುವವರ ನಿರೀಕ್ಷಣಾ ಪಟ್ಟಿಯಾನುಸಾರ ತಮ್ಮ ಪ್ರಕ್ರಿಯೆ ಪ್ರಾರಂಭಿಸಿದರು.