ಮೈಸೂರು: ಪಕ್ಷಾಂತರ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಎಲ್ಲಿಂದ ಎಲ್ಲಿಗೆ ಬಂದಿದ್ದಾರೆ?, ಅವರು ಪಕ್ಷಾಂತರ ಪ್ರವೀಣ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಪಕ್ಷಾಂತರ ಪ್ರವೀಣ: ಈಶ್ವರಪ್ಪ ವ್ಯಂಗ್ಯ
ಪಕ್ಷಾಂತರ ಮಾಡುವವರಿಗೆ ಹಾಗೂ ಮೋಸ ಮಾಡುವವರಿಗೆ ಜನರು ಪಾಠ ಕಲಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರೇ ಪಕ್ಷಾಂತರ ಮಾಡಿ ಕಾಂಗ್ರೆಸ್‌ಗೆ ಬಂದವರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಕೆ ಎಸ್ ಈಶ್ವರಪ್ಪ ಹರಿಹಾಯ್ದಿದ್ದಾರೆ.
ಚಾಮುಂಡಿ ತಾಯಿ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟವರು ಯಾವ ಮುಖ ಇಟ್ಟುಕೊಂಡು ಚುನಾವಣೆ ಎದುರಿಸುತ್ತಾರೆ ಅಂತ ಬೆಂಗಳೂರಿನಲ್ಲಿ ಶುಕ್ರವಾರ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಪಕ್ಷಾಂತರ ಮಾಡುವವರಿಗೆ ಹಾಗೂ ಮೋಸ ಮಾಡುವವರಿಗೆ ಜನರು ಪಾಠ ಕಲಿಸುತ್ತಾರೆ ಎಂದಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಹೇಗೆ ಬಂದರು ಅನ್ನೋದು ಜನರಿಗೆ ಗೊತ್ತಿಲ್ವಾ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರೇ ನೀವೇ ಪಕ್ಷಾಂತರ ಪ್ರವೀಣ. ಬೇರೆಯವರ ಬಗ್ಗೆ ಯಾಕೆ ಭಾಷಣ ಮಾಡುತ್ತೀರಿ. ನೀವು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಲಿಲ್ಲವೇ ? ಯಾವ ಮುಖ ಇಟ್ಟುಕೊಂಡು ಚುನಾವಣೆ ಎದುರಿಸಿದ್ರಿ? ಕೇವಲ ಭಾಷಣ ಮಾಡುವುದನ್ನು ಬಿಟ್ಟು, ನೀವು ನಡೆದು ಬಂದ ಹಾದಿಯನ್ನೂ ನೆನಪಿಸಿಕೊಳ್ಳಿ ಎಂದು ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ.