ಮೈಸೂರು: ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (DFRL) ನಗರದಲ್ಲಿ 3 ದಿನದ ಸಮ್ಮೇಳನ ಏರ್ಪಡಿಸಿದೆ. ಇದರಲ್ಲಿ ಮೂರು ರೀತಿಯ ಹೊಸ ಉತ್ಪನ್ನಗಳ ತಂತ್ರಜ್ಞಾನವನ್ನು ಬಿಡುಗಡೆ ಮಾಡಿದ್ದು, ಈ ತಂತ್ರಜ್ಞಾನಗಳ ಬಗ್ಗೆ ಹಾಗೂ ಸಮ್ಮೇಳನದ ಉದ್ದೇಶದ ಬಗ್ಗೆ ಹಿರಿಯ ವಿಜ್ಞಾನಿ ಡಾ.ಜಗನ್ನಾಥ್ ಈಟಿವಿ ಭಾರತ್ ಜೊತೆ ಮಾತನಾಡಿದರು.
DFRL ಭಾರತ ಸರ್ಕಾರದ ಒಂದು ಪ್ರಯೋಗಾಲಯ. ದೇಶಾದ್ಯಂತ ಸಂಸ್ಥೆಯ 52 ಲ್ಯಾಬ್ಗಳಿವೆ. ಮೈಸೂರಿನಲ್ಲೂ ಇದರ ಒಂದು ಲ್ಯಾಬ್ ಇದೆ. ಇದು 1961ರಲ್ಲಿ ಸ್ಥಾಪನೆಯಾಗಿದೆ. ಮೈಸೂರಿನ ಸಂಸ್ಥೆಯ ವತಿಯಿಂದ ಮೂರು ದಿನದ ಸಮ್ಮೇಳನ ಆಯೋಜನೆ ಮಾಡಲಾಗಿದೆ. ಭಾರತೀಯ ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಸೇನೆಯ ಯೋಧರು ದೇಶದ ವಿವಿಧ ಹವಾಮಾನದ ಭೂ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಇಂತಹ ಯೋಧರಿಗೆ ಯಾವ ಯಾವ ಪ್ರದೇಶದಲ್ಲಿ ಯಾವ ಯಾವ ರೀತಿಯ ಆಹಾರ ಪದಾರ್ಥಗಳ ಅಗತ್ಯವಿದೆ ಎಂಬುದರ ಕುರಿತು ಉದ್ಯಮಿಗಳು, ತಂತ್ರಜ್ಞರು, ವಿಜ್ಞಾನಿಗಳು ಹಾಗೂ ಆಹಾರ ಕ್ಷೇತ್ರದಲ್ಲಿ ಪರಿಣತಿ ಪಡೆದ ವ್ಯಕ್ತಿಗಳ ಜತೆ ಚರ್ಚಿಸಲು, ಅಗತ್ಯ ಮಾಹಿತಿ ಹಂಚಿಕೊಳ್ಳಲು ಈ ಸಮ್ಮೇಳನ ಕರೆಯಲಾಗಿದೆ ಎಂದರು.
ಹೊಸ ತಂತ್ರಜ್ಞಾನಗಳ ಬಿಡುಗಡೆ: 1. ಬಯೋ ಡಿ ಗ್ರೇಡೆಬಲ್ ಪ್ರೊಡಕ್ಟ್: ಬಯೋಡಿಗ್ರೇಡೆಬಲ್ ಪ್ರಾಡಕ್ಟ್ ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡುವ ಸೈನಿಕರಿಗೆ ಆಹಾರ ಪೂರೈಕೆ ಮಾಡಲು ಉಪಯೋಗವಾಗುತ್ತದೆ. ಇದು ಪ್ಲ್ಯಾಸ್ಟಿಕ್ಗೆ ಪರ್ಯಾಯ ಆಗಿದ್ದು, ದಿನನಿತ್ಯ ಬಳಸಬಹುದಾಗಿದೆ. ಪರಿಸರಸ್ನೇಹಿಯೂ ಆಗಿದೆ. ಇದರ ಉತ್ಪನ್ನಗಳನ್ನು ಮಣ್ಣಿನ ಜೊತೆಯಲ್ಲಿ ಸುಲಭವಾಗಿ 6 ತಿಂಗಳಲ್ಲಿ ವಿಲೀನಗೊಳಿಸಬಹುದು. ಉತ್ತಮ ತಂತ್ರಜ್ಞಾನ ಇದಾಗಿದ್ದು, ಕೇವಲ ರಕ್ಷಣಾ ವಲಯದಲ್ಲಿ ಅಷ್ಟೇ ಅಲ್ಲದೇ ಜನಸಾಮಾನ್ಯರು ಪ್ರತಿನಿತ್ಯ ಬಳಸಬಹುದು. ಈ ತಂತ್ರಜ್ಞಾನವನ್ನು ಖಾಸಗಿ ಕಂಪನಿಗಳಿಗೆ DFRL ನೀಡಿದೆ.