ಮೈಸೂರು:ಅತ್ಯಾಚಾರ, ವೇಶ್ಯಾವಾಟಿಕೆ, ವಂಚನೆ, ಜಾತಿ ನಿಂದನೆ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ ಮಂಜುನಾಥ್ ಕೆ.ಎಸ್. ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧದ ದೂರುಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಸಿಐಡಿ ಪೊಲೀಸರಿಗೆ ನಿರ್ದೇಶನ ನೀಡಿದೆ.
ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸೋಮವಾರ ಮಾಹಿತಿ ನೀಡಿದ್ದಾರೆ. ಸ್ಯಾಂಟ್ರೋ ರವಿ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಆತನ ಎರಡನೇ ಪತ್ನಿ ನೀಡಿರುವ ದೂರಿನ ಅನ್ವಯ ಜನೇವರಿ 2 ರಂದು ಪ್ರಕರಣ ದಾಖಲಾಗಿತ್ತು. ಸದ್ಯ ಮೈಸೂರಿನ ಪೊಲೀಸರು ತನಿಖೆ ನಡೆಸುತ್ತಿದ್ದು, ಇದೀಗ ಡಿಜಿ - ಐಜಿಪಿ ಆದೇಶದ ಬಳಿಕ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಸ್ಯಾಂಟ್ರೋ ರವಿ ಪರ ವಕೀಲ ಚೇತನ್ ಪ್ರತಿಕ್ರಿಯೆ:ಇದು ಸಿಐಡಿಗೆ ವರ್ಗಾಯಿಸುವ ಪ್ರಕರಣ ಅಲ್ಲ. ಇದು 498A ಮತ್ತು 376 ಪ್ರಕರಣ ಉಳ್ಳದ್ದಾಗಿದೆ. ಹಣ ವರ್ಗಾವಣೆ ಸೇರಿದಂತೆ ಕೆಲವು ಪ್ರಕರಣಗಳಲ್ಲಿ ಆರೋಪ ಮಾಡಿದ್ದಾರೆ ಹೊರತು ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಅಲ್ಲದೇ ಯಾವುದೇ ದೂರುದಾರರೂ ಸಹ ಈ ಪ್ರಕರಣದಲ್ಲಿ ಇಲ್ಲ. ಸಿಐಡಿಗೆ ವರ್ಗಾಯಿಸುವಂತಹ ಅಥವಾ ತನಿಖೆ ನಡೆಸುವಂತಹ ಅವಶ್ಯಕತೆ ಇಲ್ಲ. ಹಾಗಾಗಿ ನಾವು ನಮ್ಮ ಅಬ್ಜೆಕ್ಸನ್ ಹಾಕಿದ್ದೇವೆ. ನಮ್ಮ ಆರೋಪಿಯನ್ನು 25ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನಮಗೆ ಸಿಐಡಿಗೆ ವಹಿಸಿರುವ ಕಾಪಿ ಸಿಕ್ಕ ತಕ್ಷಣ ನಾವು ಸಹ ಹೈಕೋರ್ಟ್ನಲ್ಲಿ ಅಬ್ಜೆಕ್ಷನ್ ಹಾಕುತ್ತೇವೆ ಎಂದು ಸ್ಯಾಂಟ್ರೋ ರವಿ ಪರ ವಕೀಲ ಚೇತನ್ ಪ್ರತಿಕ್ರಿಯೆ ನೀಡಿದ್ದಾರೆ.