ಮೈಸೂರು: ಅನ್ನಭಾಗ್ಯ ತಿನ್ನುವುದನ್ನು ಆಡಿಕೊಂಡ ಅಡ್ಡಂಡ ಕಾರ್ಯಪ್ಪ ಅವರು ತಿನ್ನುತ್ತಿರುವ ರಂಗಾಯಣದ ಅನ್ನವನ್ನು ಪುನಶ್ಚೇತನಗೊಳಿಸಿದ್ದೇ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿರುದ್ಧ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರ್ನಾಥ್ ವಾಗ್ದಾಳಿ ನಡೆಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಡ್ಡಂಡ ಕಾರ್ಯಪ್ಪ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದು, ಇದರ ಬಗ್ಗೆ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ರಂಗಾಯಣವನ್ನು ದುರುಪಯೋಗ ಮಾಡಿಕೊಂಡವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಹಸಿದವರ ನೋವು ಕಾರ್ಯಪ್ಪಗೆ ಗೊತ್ತೇ? ಕೊರೊನಾ ಪರಿಸ್ಥಿತಿಯ ಬಗ್ಗೆ ಸಂಸ್ಥೆಯೊಂದು ಅಧ್ಯಯನ ಮಾಡಿದ ವೇಳೆ ಇಂದಿರಾ ಕ್ಯಾಂಟೀನ್ ಹಾಗೂ ಅನ್ನಭಾಗ್ಯ ಯೋಜನೆ ಇರಲಿಲ್ಲ ಅಂದಿದ್ದರೆ, ಈ ರಾಜ್ಯದ ಜನತೆ ಕೊರೊನಾದಿಂದಲ್ಲ, ಹಸಿವಿನಿಂದಲೇ ಸಾವನ್ನಪ್ಪುತ್ತಿದ್ದರು ಎಂಬ ವರದಿ ಮಾಡಿದೆ. ಇದರ ಬಗ್ಗೆ ಅರಿತು ಮಾತನಾಡಬೇಕು. ಅಭಿವೃದ್ಧಿ ವಿಚಾರದಲ್ಲಿ ಬಹಿರಂಗವಾಗಿ ಚರ್ಚೆಗೆ ಬರಲು ಒಪ್ಪದ ಬಿಜೆಪಿ, ಹೀಗೆ ರಂಗಾಯಣದ ನಾಟಕದ ಮೂಲಕ ನಮ್ಮ ನಾಯಕರನ್ನು ಅವಹೇಳನ ಮಾಡುತ್ತಿದೆ. ಶೇ. 40 ಕಮಿಷನ್ ಪಡೆದಿದ್ದೆ ನಿಮ್ಮ ನಾಲ್ಕು ವರ್ಷದ ಸಾಧನೆ ಎಂದು ಕುಟುಕಿದರು.
ಮೈಸೂರಿನ ಮಹಿಳೆ ಮೇಲೆ ದೌರ್ಜನ್ಯ ನಡೆದು ಪೊಲೀಸ್ ಇಲಾಖೆ ಮುಂದೆ ಹೋಗಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಸ್ಯಾಂಟ್ರೋ ರವಿ ಎಂಬ ವ್ಯಕ್ತಿ ಬಿಜೆಪಿಯೊಂದಿಗೆ ಸೇರಿಕೊಂಡಿದ್ದಾರೆ ಎಂದು ಆರೋಪಿಸಿದ ಪುಷ್ಪ ಅಮರ್ನಾಥ್, ಸ್ಯಾಂಟ್ರೋ ರವಿ ಪತ್ನಿಯೇ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿ, ನ್ಯಾಯ ಒದಗಿಸಲು ಬೊಮ್ಮಾಯಿಯವರ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ತಾಕತ್ತಿದ್ದರೆ ಇದರ ಹಿಂದೆ ಯಾರ್ಯಾರು ಇದ್ದಾರೆಂಬುದರ ಕುರಿತು ಸಮಗ್ರ ತನಿಖೆ ನಡೆಸಲಿ, ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಲಿ ಎಂದು ಆಗ್ರಹಿಸಿದರು.