ಮೈಸೂರು:ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ನಿಯಂತ್ರಣ ತಪ್ಪಿದ ಖಾಸಗಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಮೂವರು ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿರುವ ಘಟನೆ ತಿ. ನರಸೀಪುರ ರಸ್ತೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೈಸೂರು ತಾಲೂಕಿನ ಚೋರನಹಳ್ಳಿ ಗ್ರಾಮದ ಮಹದೇವಪ್ಪ ಅವರ ಪುತ್ರ ರಾಜೇಶ್ (30), ಶಿವಣ್ಣ ಅವರ ಪುತ್ರ ವಿನಯ್(9) ಹಾಗೂ ಕೊಳ್ಳೆಗಾಲ ತಾಲೂಕಿನ ಹಂಪಾಪುರ ಗ್ರಾಮದ ನಿವಾಸಿ ಪ್ರಜ್ವಲ್(22) ಮೃತಪಟ್ಟವರು. ತಿ.ನರಸೀಪುರ ತಾಲೂಕಿನ ಚಿಕ್ಕಮ್ಮತಾಯಿ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿದ್ದ ಮದುವೆಗೆಂದು ಚೋರನಹಳ್ಳಿ ಗ್ರಾಮದಿಂದ 30ಕ್ಕೂ ಹೆಚ್ಚು ಮಂದಿ ತೆರಳಿದ್ದರು.
ಅಲ್ಲಿಂದ ಊಟ ಮುಗಿಸಿ ವಾಪಸ್ ಹೊರಡುವಾಗ, ಇಂಡುವಾಳು-ಯಡದೊರೆ ಮಾರ್ಗದ ಮಧ್ಯದ ರಸ್ತೆಯ ಬದಿಯಲ್ಲಿ ನಿಂತಿದ್ದ ಲಾರಿಗೆ ಮುಂದಿನಿಂದ ಖಾಸಗಿ ಬಸ್ (ಕೆಎ 15,4669) ಗುದ್ದಿದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ಧಾರೆ.
ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದು, ಮೈಸೂರಿನ ಕೆ.ಆರ್. ಆಸ್ಪತ್ರೆಗೆ 9 ಜನರನ್ನು, ಕಾವೇರಿ ಆಸ್ಪತ್ರೆಗೆ 3 ಹಾಗೂ ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಇಬ್ಬರನ್ನು ದಾಖಲು ಮಾಡಲಾಗಿದೆ. ಆದರೆ ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದರಿಂದ ಅವರಿಬ್ಬರನ್ನು ಮೈಸೂರಿಗೆ ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಸಿಪಿಐ ಲವ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ತಿ.ನರಸೀಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.