ಮೈಸೂರು: ಕಾಂಗ್ರೆಸ್ ಮುಖಂಡರನ್ನು ಬೆದರಿಸಲು ಹಾಗೂ ಬಿಜೆಪಿಗೆ ಕರೆದುಕೊಳ್ಳಲು 21 ಜನ ಕಾಂಗ್ರೆಸ್ ಮುಖಂಡರ ಮೇಲೆ ಇಡಿ ದಾಳಿ ಮಾಡಿಸಲು ಸಿದ್ಧತೆ ನಡೆದಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ ಲಕ್ಷ್ಮಣ್ ಆರೋಪಿಸಿದ್ದಾರೆ.
ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಕರ್ನಾಟಕದಲ್ಲಿ ಬಿಜೆಪಿ ಆಟ ಶುರುವಾಗಿದೆ. ಜನವರಿ 5 ರಿಂದ 224 ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಹಿಂದೆ ಐಟಿ, ಇಡಿ ದಾಳಿ ಮಾಡಿಸಲು ಸಿದ್ಧತೆ ನಡೆಸಿದ್ದಾರೆ. ಡಿ ಕೆ ಶಿವಕುಮಾರ್ ಮೇಲೆ 17 ಬಾರಿ ರೇಡ್ ಮಾಡಿದ್ದಾರೆ. 37 ಬಾರಿ ಸಮನ್ಸ್ ನೀಡಿದ್ದಾರೆ. ಬಿಜೆಪಿಯವರ ಉದ್ದೇಶ 2023ಕ್ಕೆ ಅಧಿಕಾರಕ್ಕೆ ಬರಲು ಐಟಿ ಮತ್ತು ಇಡಿ ದಾಳಿ ಮಾಡಿಸಿ ಮುಖಂಡರನ್ನು ಹೆದರಿಸಿ ತಮ್ಮ ಪಕ್ಷಕ್ಕೆ ಕರೆಸಿಕೊಳ್ಳುವ ಪ್ಲಾನ್ ಇದಾಗಿದೆ ಎಂದು ಲಕ್ಷ್ಮಣ್ ದೂರಿದರು.
ಲೋಕಸಭೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ನೀಡಿದ ಮಾಹಿತಿಯಲ್ಲಿ 2014 ರಿಂದ 2022ರ ವರೆಗೆ 124 ರಾಜಕೀಯ ಮುಖಂಡರ ಮೇಲೆ ರೇಡ್ ಆಗಿದ್ದು, ಅದರಲ್ಲಿ ಶೇ.96 ರಷ್ಟು ವಿರೋಧ ಪಕ್ಷದ ನಾಯಕರ ಮೇಲೆ ಆಗಿದೆ. ಈ ಅವಧಿಯಲ್ಲಿ 5,400 ಇಡಿ ದಾಳಿಗಳಾಗಿದ್ದು, ಅದರಲ್ಲಿ 23 ಜನರ ಮೇಲೆ ಮಾತ್ರ ಕೇಸ್ ಆಗಿದೆ ಎಂದು ಲಕ್ಷ್ಮಣ್ ತಿಳಿಸಿದರು.
21 ಕಾಂಗ್ರೆಸ್ ಮುಖಂಡರ ಮೇಲೆ ದಾಳಿಗೆ ಸಿದ್ಧತೆ:ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ 21 ಜನ ಕಾಂಗ್ರೆಸ್ ಮುಖಂಡರ ಮೇಲೆ ಇಡಿ ದಾಳಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಇದರಲ್ಲಿ 8 ರಿಂದ 9 ಜನ ಶಾಸಕರು ಸಹ ಇದ್ದು, ನೀವು ಬಿಜೆಪಿಗೆ ಬನ್ನಿ ನಿಮ್ಮನ್ನು ಟಚ್ ಮಾಡುವುದಿಲ್ಲ ಎಂದು ಬೆದರಿಸಿ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಇದರ ಜೊತೆಗೆ ಈಗಾಗಲೇ ಬೇರೆ ರಾಜ್ಯಗಳಿಂದ 300 ಜನ ಐಟಿ ಅಧಿಕಾರಿಗಳು ರಾಜ್ಯಕ್ಕೆ ಬಂದಿದ್ದು, ಪ್ರತಿಯೊಬ್ಬರು ಅಭ್ಯರ್ಥಿಗಳ ಚಲನವಲನ ಗಮನಿಸುತ್ತಿದ್ದು, ಇವರಿಗೆ 1200 ಜನ ಬೇರೆ ಬೇರೆ ಕಡೆಯಿಂದ ಬಂದ ಆರ್ಎಸ್ಎಸ್ ಕಾರ್ಯಕರ್ತರು ಸಹಾಯ ಮಾಡುತ್ತಿದ್ದಾರೆ. ಪ್ರಮುಖ ಕಾಂಗ್ರೆಸ್ ಮುಖಂಡರ ಫೋನ್ ಟ್ಯಾಪಿಂಗ್ ನಡೆಯುತ್ತಿದೆ. ಬಿಜೆಪಿಯವರು ಏನೇ ಮಾಡಿದರೂ ಈ ಬಾರಿ ಕಾಂಗ್ರೆಸ್ ಪಕ್ಷದವರನ್ನು ಜೈಲಿನಲ್ಲಿಟ್ಟರು ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರ ಇಡಲು ಸಾಧ್ಯವಿಲ್ಲ ಎಂದು ಲಕ್ಷ್ಮಣ್ ಹೇಳಿದರು.
ಯಡಿಯೂರಪ್ಪ ಕುಟುಂಬಕ್ಕೆ ಕಿರುಕುಳ:ಬಿಜೆಪಿಯನ್ನು ಕರ್ನಾಟಕದಲ್ಲಿ ಕಟ್ಟಿ ಬೆಳೆಸಿದ ಪ್ರಭಾವಿ ಮುಖಂಡರಾದ ಯಡಿಯೂರಪ್ಪನವರಿಗೆ ಇಡಿ ಗನ್ ಪಾಯಿಂಟ್ ಇಟ್ಟು ಹೆದರಿಸಲಾಗುತ್ತಿದೆ. ಯಡಿಯೂರಪ್ಪನವರ ಹಿಂದೆ ಮುಂದೆ ಇರುವ ಗನ್ ಮ್ಯಾನ್ಗಳಲ್ಲಿ ಒಬ್ಬರು ಇಡಿ ಅಧಿಕಾರಿಗಳು ಇದ್ದಾರೆ ಎಂದು ತಾವು ಮಾಡಿದ ಆರೋಪವನ್ನೇ ಮತ್ತೆ ಪುನರುಚ್ಚರಿಸಿದರು.
ಸಂಸದ ಪ್ರತಾಪ್ ಸಿಂಹ ವಿರುದ್ಧ ಲೋಕಾಯುಕ್ತಕ್ಕೆ ದೂರು:ಸಂಸದ ಪ್ರತಾಪ್ ಸಿಂಹ ಆಡಿಯೋ ವೈರಲ್ ಆಗಿದೆ. ಅದರಲ್ಲಿ ವಿಶ್ವವಿದ್ಯಾಲಯ ಕುಲಪತಿಗಳನ್ನು ನೇಮಕ ಮಾಡಲು 5 ಕೋಟಿ, ವಿಟಿಯು (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ) ಕುಲಪತಿ ನೇಮಕಕ್ಕೆ 15 ಕೋಟಿ ನೀಡಬೇಕು ಹಾಗೂ ಮೈಸೂರು ವಿವಿ ನಡೆಸುವ ಕೆ-ಸೆಟ್ ಪರೀಕ್ಷೆಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಸಂಸದ ಪ್ರತಾಪ್ ಸಿಂಹ ಹೇಳಿರುವ ಆಡಿಯೋ ನನ್ನ ಬಳಿ ಇದೆ. ಇದಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಡಬೇಕು. ಜೊತೆಗೆ ಲೋಕಾಯುಕ್ತಕ್ಕೆ ಇಂದು ಅಥವಾ ನಾಳೆ ದೂರು ನೀಡುತ್ತೇನೆ. ಲೋಕಾಯುಕ್ತದಲ್ಲಿ ಸರಿಯಾದ ಸ್ಪಂದನೆ ಸಿಗದಿದ್ದರೆ ಹೈಕೋರ್ಟ್ನಲ್ಲಿ ದೂರು ದಾಖಲಿಸುತ್ತೇನೆ ಎಂದು ಲಕ್ಷ್ಮಣ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಉದ್ದೇಶಪೂರ್ವಕವಾಗಿ ನನ್ನನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ: ಡಿಕೆಶಿ