ಮೈಸೂರು:ರಾಜ್ಯದಲ್ಲಿ 15ಕ್ಷೇತ್ರಗಳಲ್ಲಿ ಉಪಚುನಾವಣೆ ಮಕ್ತಾಯವಾಗಿದ್ದು, ಅನರ್ಹರಿಗೆ ಲೈನ್ ಕ್ಲಿಯರ್ ಆಗಿದೆ. ಈಗಾಗಲೇ 12ಕ್ಷೇತ್ರಗಳಲ್ಲಿ ಅನರ್ಹರು ಗೆದ್ದಿದ್ದಾರೆ. ನಮ್ಮ ಮೇಲಿನ ಕಳಂಕದಿಂದ ಹೊರಬಂದಿದ್ದೇವೆ. ನಮ್ಮ ಕೇತ್ರದ ಆತಂಕ ಕೂಡಾ ನಿವಾರಣೆಯಾಗಿದೆ ಎಂದು ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು ನಂತರ ಮಾಧ್ಯಮದೊಂದಿಗೆ ಮಾತನಾಡಿದ್ದು, ಹುಣ್ಣಿಮೆ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೇನೆ ಎಂದರು. ಉಪಚುನಾವಣೆಯ ಸಿದ್ಧತೆ ಕುರಿತು, ಎರಡು ತಿಂಗಳಿನಿಂದ ಕ್ಷೇತ್ರದಲ್ಲಿ ಸತತವಾಗಿ ಸಂಪರ್ಕದಲ್ಲಿದ್ದು, ಅಭಿವೃದ್ಧಿಗೆ ಸತತವಾಗಿ ಕೆಲಸವನ್ನು ಮಾಡಿದ್ದೇನೆ, ಬಿಜೆಪಿಗೆ ಸೇರಿದ ನಂತರ ಅಲ್ಲಿನ ಸ್ಥಳೀಯ ಕಾರ್ಯಕರ್ತರನ್ನು ವಯಕ್ತಿಕವಾಗಿ ಭೇಟಿಯಾಗಿ ಸಹಕಾರವನ್ನು ಕೋರಿದ್ದೇನೆ ಎಂದರು.
ಸಂಪುಟದಲ್ಲಿ ಏನು ನಿರೀಕ್ಷೆಯನ್ನು ಹೊಂದಿದ್ದೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸಂಪುಟದಲ್ಲಿ ನಿರೀಕ್ಷೆ ಅಂತ ಇಲ್ಲ, ಎಲ್ಲರಿಗೂ ಉತ್ತಮ ಸ್ಥಾನ ಮಾನ ನೀಡುವ ವಿಶ್ವಾಸವಿದೆ. ಸರ್ಕಾರ ರಚನೆಯಲ್ಲಿ 17ಶಾಸಕರೂ ಪ್ರಮುಖ ಪಾತ್ರವಹಿಸಿದ್ದಾರೆ. ಎಲ್ಲರಿಗೂ ಸೂಕ್ತ ಸ್ಥಾನ ಮಾನ ನೀಡುತ್ತಾರೆ. ಈ ಬಗ್ಗೆ ನಾವು 17 ಜನರೂ ನಿನ್ನೆ ಸಭೆ ಸೇರಬೇಕಿತ್ತು. ಕೆಲವರಿಗೆ ಬರಲಾಗಲಿಲ್ಲ ಆದ್ದರಿಂದ ಉಳಿದವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೀವಿ. ಗೆದ್ದವರಿಗೆಲ್ಲಾ ಸಂಪುಟದಲ್ಲಿ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎಂದರು.
ಸಂಪುಟ ವಿಸ್ತರಣೆ ಸಿಎಂ ಗೆ ಸವಾಲು ಎನಿಸುತ್ತಿಲ್ಲವೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಆದಷ್ಟು ಬೇಗ ಸಂಪುಟ ವಿಸ್ತರಣೆಯಾಗುತ್ತದೆ. ಸಂಪುಟ ವಿಸ್ತರಣೆಯಲ್ಲಿ ಬಿಎಸ್ವೈಗೆ ಯಾವುದೇ ಸವಾಲುಗಳಿಲ್ಲ. ಸಂಪುಟ ವಿಸ್ತರಣೆ ಅನುಮತಿ ಪಡೆಯಲು ಸಿಎಂ ದೆಹಲಿಗೆ ತೆರಳುತ್ತಾರೆ. ಅನುಮತಿ ಪಡೆದು ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದರು.