ಮೈಸೂರು: 2023ರ ಸಾಂಪ್ರದಾಯಿಕ ದಸರಾ ಮಹೋತ್ಸವಕ್ಕೆ 29.25 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಡಿಸಿ ಕಚೇರಿಯಲ್ಲಿ ಶನಿವಾರ ಮಾಹಿತಿ ನೀಡಿದ ಅವರು, "ಈ ಬಾರಿಯ ಸಾಂಪ್ರದಾಯಿಕ ನಾಡಹಬ್ಬ ದಸರಾ ಮಹೋತ್ಸವವನ್ನು ಬರಗಾಲದ ಹಿನ್ನೆಲೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿತ್ತು. ಆದರೂ, 29.25 ಕೋಟಿ ರೂ. ಖರ್ಚು ಮಾಡಲಾಗಿದೆ. ಕಳೆದ ವರ್ಷದ ದಸರಾಗೆ 28.74 ಕೋಟಿ ರೂಪಾಯಿ ವ್ಯಯಿಸಲಾಗಿತ್ತು. ಈ ಬಾರಿ ಕ್ರೀಡಾ ದಸರಾ, ದೀಪಾಲಂಕಾರ, ಆಹಾರ ಮೇಳ, ಸ್ವಚ್ಛತೆಗೆ ಆಯಾ ಇಲಾಖೆಗಳು ಖರ್ಚು ಮಾಡಿದ್ದು, ಆ ವೆಚ್ಚ ಈ ಲೆಕ್ಕದಲ್ಲಿ ಸೇರಿಲ್ಲ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮಗಳಿಗೆ ಮಾಡಿರುವ ವೆಚ್ಚವೆಷ್ಟು?:ಸರ್ಕಾರದಿಂದ ಬಿಡುಗಡೆಯಾಗಿದ್ದ 7.15 ಕೋಟಿ ರೂ ಹಾಗೂ ಮುಡಾದಿಂದ 7.10 ಕೋಟಿ ರೂ ಅನುದಾನ ಬಿಡುಗಡೆಯಾಗಿತ್ತು. ಅರಮನೆ ಮುಂಭಾಗದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅರಮನೆ ಮಂಡಳಿಯು 7.5 ಕೋಟಿ ರೂ ಭರಿಸಿತ್ತು ಹಾಗೂ ಪ್ರಾಯೋಜಕತ್ವದಿಂದ 12.25 ಕೋಟಿ ಸಂಗ್ರಹವಾಗಿದೆ. ಗೋಲ್ಡ್‌ಕಾರ್ಡ್ ಮೂಲಕ 1.19 ಕೋಟಿ ರೂ ಆದಾಯ ಬಂದಿತ್ತು. ಆಹಾರ ಮೇಳಕ್ಕೆ ಪ್ರಾಯೋಜಕತ್ವದಿಂದ 81 ಲಕ್ಷ ಸಂಗ್ರಹವಾಗಿದ್ದು, ಒಟ್ಟು 29.26 ಕೋಟಿ ರೂ ದಸರಾ ಮಹೋತ್ಸವಕ್ಕೆ ದೊರೆತಿದೆ.
ಸಾರಿಗೆ, ಆಮಂತ್ರಣ, ಸ್ಥಳಾವಕಾಶ ಹಾಗೂ ಶಿಷ್ಟಾಚಾರಕ್ಕೆಂದು 3.22 ಕೋಟಿ ರೂ ವೆಚ್ಚವಾಗಿದೆ. ಮೆರವಣಿಗೆಗೆ- 12.45 ಕೋಟಿ, ಪಂಜಿನ ಕವಾಯತಿಗೆ– 1.24 ಕೋಟಿ ರೂ., ಸಾಂಸ್ಕೃತಿಕ ದಸರಾಗೆ -12 ಕೋಟಿ, ಗಜಪಡೆಗೆ– 1.60 ಕೋಟಿ, ಸಿವಿಲ್ ಕಾಮಗಾರಿ- 3.6 ಕೋಟಿ ಬಳಸಲಾಗಿದೆ. ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ದಸರಾಕ್ಕೆ ಅನುದಾನವಾಗಿ 12.20 ಕೋಟಿ ರೂಪಾಯಿ ಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಇದನ್ನೂ ಓದಿ:ದಸರಾ ಯಶಸ್ಸಿಗೆ ಶ್ರಮಿಸಿದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ