ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡು ದಿನದ ಮೈಸೂರು, ಬಂಡೀಪುರ ಪ್ರವಾಸಕ್ಕಾಗಿ ಇಂದು ರಾತ್ರಿ ಮೈಸೂರಿಗೆ ಆಗಮಿಸಿ, ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇದಕ್ಕಾಗಿ ನಗರದಲ್ಲಿ ಬಿಗಿ ಪೊಲೀಸ್ ಭದ್ರತೆ ಹಾಕಲಾಗಿದ್ದು, ಕಳೆದ ಎರಡು ದಿನಗಳಿಂದ ಎಸ್ಪಿಜಿ ಅಧಿಕಾರಿಗಳು ಪ್ರಧಾನಿ ಸಂಚರಿಸುವ ಮಾರ್ಗಗಳಲ್ಲಿ ಭದ್ರತಾ ತಾಲೀಮು ನಡೆಸುತ್ತಿದ್ದಾರೆ. ಇಂದು ಮತ್ತು ನಾಳೆ ಪ್ರಧಾನಿ ಮೋದಿ ಅವರು ಭಾಗವಹಿಸುವ ಕಾರ್ಯಕ್ರಮಗಳ ವಿವರ ಇಲ್ಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಸಂಜೆ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ರಾತ್ರಿ ನಗರದ ರ‍್ಯಾಡಿನ್ ಸನ್ ಬ್ಲೂ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಏಪ್ರಿಲ್ 9 ರ ಭಾನುವಾರ ಬೆಳಗ್ಗೆ ನಗರದ ಒವಲ್ ಗ್ರೌಂಡ್ ಹೆಲಿಪ್ಯಾಡ್ನಿಂದ ಬಂಡೀಪುರಕ್ಕೆ ಹೋಗಿ, ಅಲ್ಲಿಂದ ಸಫಾರಿ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. 10 ಗಂಟೆಗೆ ವಾಪಸ್ ಮೈಸೂರಿಗೆ ಆಗಮಿಸಲಿದ್ದು, ಅಲ್ಲಿಂದ ರಸ್ತೆ ಮೂಲಕ ಕೆಎಸ್ಓಯೂ ಘಟಿಕೋತ್ಸವ ಭವನಕ್ಕೆ ಆಗಮಿಸಲಿದ್ದು, ಅಲ್ಲಿ 2022 ರ ಹುಲಿ ಗಣತಿ ವರದಿಯನ್ನು ಬಿಡುಗಡೆ ಮಾಡಲಿದ್ದಾರೆ.
ಈ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪ್ರಧಾನ ಮಂತ್ರಿ ಮೋದಿ ಸಂಚರಿಸುವ ಮಾರ್ಗಗಳನ್ನು ಎಸ್ಪಿಜಿ ಅಧಿಕಾರಿಗಳು ಪರಿಶೀಲನೆ ನಡೆಸಿ, ಬಿಗಿ ಭದ್ರತಾ ವ್ಯವಸ್ಥೆಯನ್ನು ಅಣಿಗೊಳಿಸುತ್ತಿದ್ದಾರೆ. ಪ್ರಧಾನ ಮಂತ್ರಿ ಮೋದಿ ಸಂಚರಿಸುವ ಮಾರ್ಗಗಳಲ್ಲಿ ಭದ್ರತಾ ತಾಲೀಮನ್ನು ಕಳೆದ ಎರಡು ದಿನಗಳಿಂದ ನಡೆಸಿದ್ದು, ಇಂದು ಸಹ ಭದ್ರತಾ ತಾಲೀಮು ನಡೆಸಲಿದ್ದಾರೆ.
ಕೋವಿಡ್ ಪರೀಕ್ಷೆ:ಪ್ರಧಾನಿ ನರೇಂದ್ರ ಮೋದಿ ಭೇಟಿಗೂ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೋವಿಡ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಆ ಕೋವಿಡ್ ಪರೀಕ್ಷೆಯ ವರದಿ ಕಡ್ಡಾಯವಾಗಿದ್ದು, ಇದರ ಜೊತೆಗೆ ಪ್ರಧಾನಿ ಮೋದಿ ಅವರನ್ನ ಸ್ವಾಗತ ಮಾಡುವ ಅಧಿಕಾರಿಗಳು, ಪಕ್ಷದ ಮುಖಂಡರುಗಳಿಗೆ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಇದರ ಜೊತೆಗೆ ಬಂಡೀಪುರದ ಸಫಾರಿಯ ಸಂದರ್ಭದಲ್ಲಿ ಪ್ರಧಾನಿ ಮಾತುಕತೆ ನಡೆಸಲಿರುವ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಗೂ ಸಹ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ.
ನಾಲ್ಕನೇ ಬಾರಿಗೆ ಪ್ರಧಾನ ಮಂತ್ರಿ ಮೋದಿ ಮೈಸೂರು ಭೇಟಿ:ಪ್ರಧಾನಿಯಾದ ನಂತರ ನರೇಂದ್ರ ಮೋದಿ ಅವರು ನಾಲ್ಕು ಬಾರಿ ಮೈಸೂರು ಭೇಟಿ ನೀಡಿದ್ದು, ಒಟ್ಟು ನಾಲ್ಕು ಬಾರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಳೆದ ಬಾರಿ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ನಂತರ ಈ ಬಾರಿ ಬಂಡೀಪುರ ಹಾಗೂ ಮೈಸೂರಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.
ಇಂದು ಹೈದರಾಬಾದ್ಗೆ ಆಗಮಿಸಿರುವ ಪ್ರಧಾನಿ ಮೋದಿ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆಯನ್ನು ನೀಡಿ, ಬಳಿಕ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲಿಂದ ಚೆನ್ನೈಗೆ ತೆರಳುವ ಪ್ರಧಾನಿ ಮೋದಿ ಹೊಸದಾಗಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ ಟರ್ಮಿನಲ್ ಉದ್ಘಾಟನೆ ಮಾಡಲಿದ್ದಾರೆ. ನಂತರ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ಫ್ಲ್ಯಾಗ್ ತೋರಿಸಲಿದ್ದಾರೆ. ಚೆನ್ನೈನಿಂದ ನೇರವಾಗಿ ಮೈಸೂರಿಗೆ ಆಗಮಿಸಿ ಇಂದು ಮೈಸೂರಿನಲ್ಲಿ ಪ್ರಧಾನಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಹಾಗೂ ನಾಡಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ:ಶನಿವಾರ ರಾಜ್ಯಕ್ಕೆ ಮೋದಿ: ಬಂಡೀಪುರದಲ್ಲಿ 15 ಕಿ.ಮೀ ಸಫಾರಿ, ಕಾಡಿನ ಮಕ್ಕಳಿಂದ ವಿಶೇಷ ಟೀ ವ್ಯವಸ್ಥೆ