ಮೈಸೂರು:ಜಾತಿ ಗಣತಿ ವರದಿ ಬಿಡುಗಡೆಗೆ ವೀರಶೈವ ಲಿಂಗಾಯತ ಸಮುದಾಯ ಯಾಕೆ ವಿರೋಧ ಮಾಡುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಮೊದಲು ಜಾತಿ ಗಣತಿ ವರದಿ ಬಿಡುಗಡೆ ಆಗಲಿ, ಆ ನಂತರ ಚರ್ಚೆ ಮಾಡೋಣ. ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಸ್ವೀಕರಿಸಿ, ಬಿಡುಗಡೆ ಮಾಡಲಿ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಕ್ರಿಸ್ಮಸ್ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಬಿಷಪ್ ಹೌಸ್ಗೆ ಭೇಟಿ ನೀಡಿ ಹಬ್ಬದ ಶುಭಾಶಯ ತಿಳಿಸಿದ ವಿಶ್ವನಾಥ್, ಜಗತ್ತಿಗೆ ಶಾಂತಿ ಸಾರಿದ ಮಹಾನ್ ವ್ಯಕ್ತಿ ಯೇಸುವಿನ ಸಂದೇಶಗಳನ್ನು ಪ್ರಸ್ತಾಪಿಸಿದರು. ಬಳಿಕ ಮಾತನಾಡುತ್ತಾ, ಜಾತಿ ಗಣತಿ ವರದಿ ನೋಡದೇ, ತಿಳಿಯದೇ ಸುಮ್ಮನೆ ಆರಂಭದಲ್ಲೇ ವಿರೋಧ ಮಾಡುವುದು ಸರಿಯಲ್ಲ. ಇದೇ ರೀತಿ ಹಿಂದೆ ಹಾವನೂರು ಆಯೋಗದ ವರದಿಯನ್ನೂ ಬಿಡುಗಡೆ ಮಾಡಲು ಸಾಕಷ್ಟು ವಿರೋಧವಿತ್ತು. ಅಂದಿನ ಸಿಎಂ ದೇವರಾಜ್ ಅರಸು ಎಲ್ಲರ ವಿರೋಧದ ನಡುವೆಯೂ ವರದಿ ಸ್ವೀಕರಿಸಿದರು. ಅದೇ ರೀತಿ ಯಾರದೇ ಮುಲಾಜಿಗೆ ಒಳಗಾಗದೇ ಸಿಎಂ ಸಿದ್ದರಾಮಯ್ಯ ವರದಿ ಸ್ವೀಕರಿಸಿ ಬಿಡುಗಡೆ ಮಾಡಬೇಕು. ಆ ನಂತರ ವರದಿಯಲ್ಲೇನಿದೆ ಎಂಬುದರ ಬಗ್ಗೆ ಚರ್ಚೆ ನಡೆಯಲಿ ಎಂದರು.