ಮೈಸೂರು:ಸತ್ತ ಅಂಬರೀಶರನ್ನು ಸಶಕ್ತ ಅಂಬರೀಶರನ್ನಾಗಿ ಮಾಡಿದ್ದು ಮಂಡ್ಯ ಲೋಕಸಭಾ ಚುನಾವಣೆ. ಅಂದು ನಡೆದ ಚುನಾವಣೆ ದೇಶದ ಗಮನವನ್ನೇ ಸೆಳೆದಿತ್ತು ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ‘ಮತಭಿಕ್ಷೆ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ರಾಜ್ಯಕ್ಕೆ ಅತಿರಥ ರಾಜಕಾರಣಿಗಳನ್ನು ನೀಡಿದೆ. ಇಡೀ ದೇಶದ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಜಯಲಲಿತಾ ಕೂಡ ಮಂಡ್ಯದವರು. ಮಂಡ್ಯ ಲೋಕಸಭಾ ಚುನಾವಣೆ ಸತ್ತ ಅಂಬರೀಶರನ್ನು ಸಶಕ್ತ ಅಂಬರೀಶರನ್ನಾಗಿ ಮಾಡಿದೆ. ಚುನಾವಣಾ ಸಂದರ್ಭದಲ್ಲಿ ಕೆಲ ನಾಯಕರ ಹೇಳಿಕೆಗಳು ಸುಮಲತಾ ಎಂಬ ಹೆಣ್ಣು ಮಗಳನ್ನು ಇಡೀ ದೇಶಕ್ಕೆ ಪರಿಚಯಿಸಿದವು ಎಂದರು.
ಮಾಜಿ ಸಚಿವ ಹೆಚ್. ವಿಶ್ವನಾಥ್ ವಿಶ್ವನಾಥ್ ಅವರಿಗೆ ಸಾಹಿತ್ಯ ಕೋಟಾದಡಿ ಎಂಎಲ್ಸಿ ಸ್ಥಾನ ನೀಡಿದ್ದಾರೆ ಎಂದು ಕೆಲವರು ಜರಿದರು. ನಾನೇನು ಕಾಗಕ್ಕ ಗುಬ್ಬಕ್ಕ ಕಥೆ ಬರೆದಿಲ್ಲ. ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಇಟ್ಟುಕೊಂಡೇ ನಾನು ಮತಸಂತೆ ಸೇರಿದಂತೆ ಹಲವು ಪುಸ್ತಕಗಳನ್ನು ಬರೆದಿರುವುದು. ಪರಾಮರ್ಶೆ ಮಾಡಿಯೇ ಪುಸ್ತಕಗಳನ್ನು ನಾನು ಬರೆದಿರುವುದು ಎಂದು ತಿಳಿಸಿದರು.
ನಮ್ಮಲ್ಲಿ ಶಿಷ್ಟ ಸಾಹಿತ್ಯ, ಶಿಶು ಸಾಹಿತ್ಯ, ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯ, ಶರಣ ಸಾಹಿತ್ಯ ಇದೆ. ಆದರೆ, ರಾಜಕೀಯ ಸಾಹಿತ್ಯವಿರಲಿಲ್ಲ. ರಾಜಕಾರಣಿಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಣಿಗಳನ್ನು ದೂರವಿಡಿ ಎಂಬ ಮಾತುಗಳು ಕೇಳಿ ಬರುತ್ತವೆ.
ರಾಜಕೀಯ ಸಾಹಿತ್ಯಗಳು ಜನರಿಗೆ ತಲುಪಬೇಕು. ಕನ್ನಡಕ್ಕೊಂದು ಸಚಿವಾಲಯ ಇರಲಿಲ್ಲ, ಕೇವಲ ನಿರ್ದೇಶನಾಲಯವಿತ್ತು. ಇದ್ಯಾವುದಕ್ಕೂ ಆಗಿನ ಸಾಹಿತಿಗಳು ತಲೆಕೆಡಿಸಿಕೊಂಡಿರಲಿಲ್ಲ. ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ ಎಂದು ತಿಳಿಸಿದರು.