ಮೈಸೂರು:ಭ್ರಷ್ಟಾಚಾರ ತಡೆಯುವ ಬದ್ಧತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಲ್ಲ. ಅವರು ಎಷ್ಟು ಬಾರಿ ಕರ್ನಾಟಕಕ್ಕೆ ಬಂದರೂ, ಮತದಾರರ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ. ಕಾಂಗ್ರೆಸ್ ಈ ಬಾರಿ ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಪಡೆಯಲಿದ್ದು, ನಾವು ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ನಾನು ಸಹ ವರುಣಾದಿಂದ ಅತಿ ಹೆಚ್ಚು ಲೀಡ್ ನಿಂದ ಗೆಲ್ಲುತ್ತೇನೆ ಎಂದು ಮೈಸೂರಿನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಎಷ್ಟು ಬಾರಿ ಆಗಮಿಸಿದರು ಮತದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಯಾಕೆ ಹೆಚ್ಚು ಬಾರಿ ಮೋದಿ ಕರ್ನಾಟಕಕ್ಕೆ ಬರುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಸಿದ್ದರಾಮಯ್ಯ, ರಾಜ್ಯ ಬಿಜೆಪಿಯವರಿಗೆ ಮತ ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ. ಅದಕ್ಕೆ ಮೋದಿಯವರು ಹೆಚ್ಚು ಬಾರಿ ಬಂದರೆ ಗೆಲ್ಲಬಹುದು ಎಂಬ ಭ್ರಮೆಯಲ್ಲಿ ರಾಜ್ಯ ಬಿಜೆಪಿಯವರು ಇದ್ದಾರೆ. ಮೋದಿ ಎಷ್ಟು ಬಾರಿ ಬಂದರು ಮತದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಟಾಂಗ್ ಕೊಟ್ಟರು.
ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು:ಕಾಂಗ್ರೆಸ್ ಪಕ್ಷದ ಬಗ್ಗೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಬೆಂಗಳೂರಿನಲ್ಲಿ 50 ಸಾವಿರ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುತ್ತಿದ್ದಾರೆ. ಅನಗತ್ಯ ರಸ್ತೆ ನಿರ್ಬಂಧ ಮಾಡುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುವುದಿಲ್ಲವೇ. ನನಗೆ ಗಂಗಾವತಿಗೆ ಹೋಗಲು ಪರ್ಮಿಷನ್ ಕೊಡಲಿಲ್ಲ. ಆದರೆ ಮೋದಿ ಪ್ರಚಾರಕ್ಕೆ ಯಾವುದೇ ವಿರೋಧ ಇಲ್ಲ. ಇವರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಒಂದು ದಿನ ಮುಂಚೆಯೇ ಬರಲು ಆಗುವುದಿಲ್ಲವೇ, ಇವರು ಹೇಳಿದ ಹಾಗೆಯೇ ನಡೆಯಬೇಕೇ ಎಂದು ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ :ಕರ್ನಾಟಕದಲ್ಲಿ ಈ ಬಾರಿ ನಡೆಯುವ ಚುನಾವಣೆ ರಾಷ್ಟ್ರ ಮಟ್ಟದ ರಾಜಕೀಯ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದೆ. ಕರ್ನಾಟಕದಲ್ಲಿ ಬಿಜೆಪಿ ವಿರುದ್ಧದ ಅಲೆ ಬೀಸುತ್ತಿದ್ದು. ಜನರು ಬಿಜೆಪಿ ಸರ್ಕಾರದ ವಿರುದ್ಧ ಬೇಸತ್ತಿದ್ದು, ಬದಲಾವಣೆ ಬಯಸುತ್ತಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಬಾರಿ ಅತಂತ್ರ ಸರ್ಕಾರ ಬರುವುದಿಲ್ಲ, ಸ್ಪಷ್ಟವಾಗಿ ಕಾಂಗ್ರೆಸ್ಗೆ ಬಹುಮತ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.