ಜೆಡಿಎಸ್ ಪಂಚರತ್ನ ರಥಯಾತ್ರೆ ಸಮಾರೋಪ ಸಮಾರಂಭದಲ್ಲಿ ಹೆಚ್ ಡಿ ದೇವೇಗೌಡ.. ಮೈಸೂರು: ನಮ್ಮ ಪಕ್ಷ ಶ್ರಮ ಮತ್ತು ದುಡಿಮೆಯ ಮೇಲೆ ನಿಂತಿರುವ ಪಕ್ಷ. ನಾವು ರೈತರ ಮಕ್ಕಳು, ಶ್ರಮದಿಂದ ದುಡಿಯುತ್ತೇವೆ. ಇಲ್ಲ ಸಲ್ಲದ ಬಣ್ಣದ ಮಾತುಗಳಿಂದ ಜನರ ನಡುವೆ ಜಾತಿ ಮತ್ತು ಧರ್ಮದ ವೈಷಮ್ಯ ಬಿತ್ತಿ ಆಳುವ ಮಾದರಿ ನಮ್ಮದಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ. ದೇವೇಗೌಡ ಹೇಳಿದರು.
ಭಾನುವಾರ ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ನಡೆದ ಪಂಚರತ್ನ ರಥಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನನ್ನ ಅನಾರೋಗ್ಯದ ನಡುವೆಯೂ ಈ ರೀತಿ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಕ್ತಿ ನೀಡಿದ ಭಗವಂತನ ಆಟ ಮುಂದೆ ಏನೋ ಇದೆ. ಮತ್ತೆ ಜನಸೇವೆ ಮಾಡಲು ಅವಕಾಶ ಸಿಗುವ ಶುಭ ಸೂಚನೆ ಇದು ಎಂದರು.
ನಮ್ಮದು ಶ್ರಮದ ಹಾಗೂ ದುಡಿಮೆಯ ಮೇಲೆ ನಿಂತಿರುವ ರೈತ ಮಕ್ಕಳ ಪಕ್ಷ. ನಾವು ದುಡಿದು ತಿನ್ನುತ್ತೇವೆ. ಇಲ್ಲಸಲ್ಲದ ಬಣ್ಣದ ಮಾತುಗಳಿಂದ ಜನರಲ್ಲಿ ಜಾತಿ, ಧರ್ಮದ ವೈಷಮ್ಯ ಬಿತ್ತಿ, ಜನರನ್ನು ಒಡೆದು ಆಳುವ ಪಕ್ಷ ನಮ್ಮದಲ್ಲ. ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರ ಹಾಗೆ ಒಡೆದು ಆಳುವ ನೀತಿ, ಇತ್ತೀಚಿನ ದಶಕಗಳಲ್ಲಿ ಕೆಲವು ಪಕ್ಷಗಳು ಮುಂದುವರಿಸಿಕೊಂಡು ಬರುತ್ತಿರುವುದನ್ನು ನೋಡುತ್ತಿದ್ದೇವೆ. ಈ ಸುಳ್ಳು ಹೆಚ್ಚು ದಿನ ನಡೆಯುವುದಿಲ್ಲ, ಸತ್ಯ ಮಾತ್ರ ಪುನರ್ಜನ್ಮ ಪಡೆಯುತ್ತಿರುತ್ತದೆ. ಜಾತಿ ಧರ್ಮದ ಬಗ್ಗೆ ವಿಷ ಬಿಜ ಬಿತ್ತುವ ಜನರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಹೆಚ್ ಡಿ.ದೇವೇಗೌಡರು ಜನರಿಗೆ ಮನವಿ ಮಾಡಿದರು.
ಅಧಿಕಾರಕ್ಕೆ ಬಂದ ತಕ್ಷಣ ಪಂಚರತ್ನ ಯೋಜನೆ ಜಾರಿ:ಕುಮಾರಸ್ವಾಮಿಗೆ ಮತ್ತೇ ಜನರು ಆಶೀರ್ವಾದ ಮಾಡಿದರೆ, ಅಧಿಕಾರ ಬಂದ ಕೂಡಲೇ ತಾವು ಕೊಟ್ಟ ಪಂಚರತ್ನ ಯೋಜನೆಗಳನ್ನು ಎಷ್ಟೇ ಕಷ್ಟ ಬಂದರೂ ಜಾರಿ ಮಾಡೇ ಮಾಡುತ್ತಾರೆ. ಜನರು ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು. ನನ್ನ ಏಳು ದಶಕಗಳ ರಾಜಕೀಯ ಜೀವನದಲ್ಲಿ ಎಂದಿಗೂ ಜನರ ಕಣ್ಣಿಗೆ ಮಣ್ಣೆರಚಿಲ್ಲ. ನಾವು ಕೊಟ್ಟ ಮಾತನ್ನು ಈಡೇರಿಸಲು ಅಧಿಕಾರ ಸಿಕ್ಕಾಗ ಪ್ರಯತ್ನಿಸಿದ್ದೇವೆ, ಹೋರಾಟ ಮಾಡಿದ್ದೇವೆ. ಹೋರಾಟ ಫಲ ಕೊಡದ ಸಂದರ್ಭದಲ್ಲಿ ರಾಜೀನಾಮೆ ಕೊಟ್ಟು ಮತ್ತೆ ಜನರ ಮುಂದೆ ಹೋಗಿದ್ದೇವೆ. ಎಂದಿಗೂ ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ ಎಂದು ಹೇಳಿದರು.
ಜನ ಮತ್ತೇ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ - ಹೆಚ್ಡಿಡಿ :ರಾಜಕೀಯ ಜೀವನದಲ್ಲಿ ಎಲ್ಲಾ ವರ್ಗದ, ಧರ್ಮದ ಜನರ ಹಕ್ಕಿಗಾಗಿ ಹೋರಾಟ ಮಾಡಿದ್ದೇನೆ. ಮಹಿಳೆಯರಿಗಾಗಿ ರಾಜಕೀಯ ಮೀಸಲಾತಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹಾಗೂ ಇತರ ಎಲ್ಲಾ ವರ್ಗದ ಜನರಿಗೂ ಅಧಿಕಾರ ಸಿಕ್ಕಾಗ ಕೆಲಸ ಮಾಡಿದ್ದೇನೆ. ನಾನು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಆಗಿದ್ದಾಗ ಏನು ಮಾಡಿದ್ದೆ ಎಂಬುದು ಕಡತದಲ್ಲಿ ಇದೆ. ಆದರೆ ಅದನ್ನೇ ಪ್ರಚಾರ ಮಾಡಲು ಬಳಸಿಕೊಂಡಿಲ್ಲ. ಯಾವುದೇ ಫಲಾಪೇಕ್ಷೆ ಇಲ್ಲದೆ, ಭಗವತ್ ಗೀತೆಯಲ್ಲಿ ಹೇಳಿದ ಹಾಗೆ ದುಡಿದಿದ್ದೇನೆ. ಈ ಬಾರಿ ಜನ ಮತ್ತೇ ಆಶಿರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೇಳಿದರು
ಜೆಡಿಎಸ್ ಭದ್ರಕೋಟೆಯನ್ನ ಛಿದ್ರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ- ಹೆಚ್ಡಿಕೆ:ಹೆಚ್ ಡಿ.ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್ನಲ್ಲಿ ಯಾವುದೇ ಬಿರುಕು ಇಲ್ಲ. ಪಕ್ಷದ ಭದ್ರಕೋಟೆಯನ್ನ ಛಿದ್ರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಕಳೆದ ಬಾರಿಗಿಂತ ಈ ಬಾರಿ ಜೆಡಿಎಸ್ ಮೇಲುಗೈ ಸಾಧಿಸಲಿದ್ದು, ಹಳೇ ಮೈಸೂರು ಭಾಗದ ಬಹುತೇಕ ಜಿಲ್ಲೆಗಳಲ್ಲಿ ಜೆಡಿಎಸ್ ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ. ನಮ್ಮ ಪಕ್ಷದ ನಾಯಕರು ವ್ಯವಸ್ಥಿತವಾಗಿ ಚುನಾವಣೆ ಎದುರಿಸಲು ಸಿದ್ಧವಾಗಿದ್ದಾರೆ. ಮತ್ತೆ ಬಹುಮತದೊಂದಿಗೆ ಅಧಿಕಾರ ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿ ನಮಗೆ 50 ಸ್ಥಾನ ಕೊಡುತ್ತೀರಿ ಎಂಬುದು ಗೊತ್ತಿದೆ. ಆದರೆ, ನನಗೆ ಬೇಕಿರುವುದು 123 ಸ್ಥಾನ. ಇಷ್ಟು ಸ್ಥಾನವನ್ನು ನೀಡಿದರೆ ಸ್ವತಂತ್ರ್ಯವಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಶಕ್ತಿ ಬರುತ್ತದೆ. ದೇವೇಗೌಡರ ಆರೋಗ್ಯ ಸರಿಯಿಲ್ಲ, ಆದರೂ ನಾನು ಅವರನ್ನು ನೋಡಲು ಆಸ್ಪತ್ರೆಗೆ ಹೋಗಲಿಲ್ಲ. ಎರಡು ಬಾರಿ ಹೃದಯ ಚಿಕಿತ್ಸೆ ಆದರೂ, 18 ಗಂಟೆ ಈ ನಾಡಿನ ಜನರ, ರೈತರ , ರೈತ ಹೆಣ್ಣು ಮಕ್ಕಳ ನೆಮ್ಮದಿಯ ಬದುಕಿಗಾಗಿ ಹೋರಾಟ ಮಾಡುತ್ತಿದ್ದೇನೆ ಹೊರತೂ ನಾನು ಮುಖ್ಯಮಂತ್ರಿ ಆಗಿ ಮೆರೆಯಬೇಕು ಎಂಬ ಆಸೆಯಿಂದ ಅಲ್ಲ ಎಂದು ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಅಂಬಾನಿ ಹಾಗೂ ಅದಾನಿ ಚಿಂತೆ, ನಮ್ಮ ಸಿದ್ದರಾಮಯ್ಯನವರಿಗೆ ಕ್ಷೇತ್ರ ಹುಡುಕುವ ಚಿಂತೆ, ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಸ್ಲಿಮರ ಮೀಸಲಾತಿ ಕಡಿಮೆ ಮಾಡಿ ಬೇರೆಯವರಿಗೆ ನೀಡಿದ್ದಾರೆ. ಇದು ಹೆಚ್ಚಿನ ಕಾಲ ನಡೆಯುವುದಿಲ್ಲ, ನಾಳೆ ಚುನಾವಣೆ ಘೋಷಣೆ ಆಗಿ ನೀತಿ ಸಂಹಿತೆ ಜಾರಿಗೆ ಬಂದರೆ, ನ್ಯಾಯಾಲಯದಲ್ಲಿ ಇದು ನಿಲ್ಲುವುದಿಲ್ಲ. ನಮಗೆ ಅನ್ಯಾಯವಾದರೆ ನಾವು ಸುಮ್ಮನೆ ಇರುವುದಿಲ್ಲ ಎಂದರು.
ಇದನ್ನೂ ಓದಿ:ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ: ಸಿಎಂ ಬೊಮ್ಮಾಯಿ