ಕರ್ನಾಟಕ

karnataka

ETV Bharat / state

ಹಾಡಿ ವ್ಯಕ್ತಿಯ ಅನುಮಾನಾಸ್ಪದ ಸಾವು ಪ್ರಕರಣ: ಅರಣ್ಯ ಇಲಾಖೆ 17 ಮಂದಿ ವಿರುದ್ಧ ದೂರು ದಾಖಲು - Sale of deer meat in mysore

ಅರಣ್ಯ ಇಲಾಖೆಯ ವಶದಲ್ಲಿದ್ದ ವ್ಯಕ್ತಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ, 17 ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಹಾಡಿ ವ್ಯಕ್ತಿಯ ಅನುಮಾನಾಸ್ಪದ ಸಾವು ಪ್ರಕರಣ
ಹಾಡಿ ವ್ಯಕ್ತಿಯ ಅನುಮಾನಾಸ್ಪದ ಸಾವು ಪ್ರಕರಣ

By

Published : Oct 13, 2022, 1:07 PM IST

ಮೈಸೂರು: ಅಕ್ರಮವಾಗಿ ಜಿಂಕೆ ಮಾಂಸ ಮಾರಾಟ ಆರೋಪದ ಮೇಲೆ ಹೊಸಹಳ್ಳಿ ಹಾಡಿಯ 3 ಜನರನ್ನು ಅರಣ್ಯ ಇಲಾಖೆಯವರು ಬಂಧಿಸಿದ್ದರು. ಅವರ ವಶದಲ್ಲಿದ್ದ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದು, ಅದು ಕೊಲೆ ಎಂದು ಹಾಡಿಯ ಜನರು ಆರೋಪಿಸಿದ್ದಾರೆ. ಈ ಸಂಬಂಧ ಗುಂಡೆ ಅರಣ್ಯ ವಲಯದ ಆರ್​​ಎಫ್ಓ, ಡಿಆರ್ಎಫ್ಓ ಸೇರಿದಂತೆ 17 ಅರಣ್ಯ ಸಿಬ್ಬಂದಿ ವಿರುದ್ಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಅಕ್ರಮ ಬಂಧನ ಸಂಬಂಧ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿದ್ದ ಸಿಬ್ಬಂದಿ: ಜಿಂಕೆ ಮಾಂಸ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡ್ರೆ ಅರಣ್ಯ ವಲಯದ ಹೊಸಹಳ್ಳಿ ಹಾಡಿಯ ಪ್ರಸಾದ್, ಮುನಿಯಪ್ಪ ಮತ್ತು ಕರಿಯಪ್ಪ ಎಂಬ ಮೂರು ಜನರನ್ನು ಮೂರು ದಿನಗಳ ಹಿಂದೆ ಬಂಧಿಸಲಾಗಿತ್ತು. ಇದರಲ್ಲಿ ಕರಿಯಪ್ಪ (41) ಎಂಬ ವ್ಯಕ್ತಿಯನ್ನು ಸೋಮವಾರ ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು, ಹಲ್ಲೆ ನಡೆಸಿದ ಪರಿಣಾಮ ಆತ ತೀವ್ರವಾಗಿ ಅಸ್ವಸ್ಥಗೊಂಡಿದ್ದಾನೆ. ಬಳಿಕ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವಿಗೀಡಾಗಿದ್ದಾನೆ.

ಗಿರಿಜನರಿಂದ ಪ್ರತಿಭಟನೆ:ಇದು ಕೊಲೆಯಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ವಿವಿಧ ಹಾಡಿಗಳ ಗಿರಿಜನರು ಅರಣ್ಯ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ರಾತ್ರಿ ವೇಳೆಗೆ ಪೊಲೀಸ್ ಠಾಣೆಯಲ್ಲಿ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾದ ನಂತರ ಪ್ರತಿಭಟನೆ ಹಿಂಪಡೆದಿದ್ದಾರೆ.

ಪ್ರಕರಣ ದಾಖಲು: ಈ ಸಂಬಂಧ ಕೊಲೆ ಮತ್ತು ಅಕ್ರಮ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡ್ರೆ ಅರಣ್ಯ ವಲಯದ ಆರ್​ಎಫ್ಓ ಅಮೃತೇಶ್, ಡಿಆರ್ಎಫ್ಓ ಕಾರ್ತಿಕ್ ಯಾದವ್, ಸಿಬ್ಬಂದಿಗಳಾದ ಆನಂದ್, ಬಾಹುಬಲಿ, ರಾಮು, ಶೇಖರಯ್ಯ, ಸದಾಶಿವ, ಮಂಜು, ಉಮೇಶ್, ಸಂಜಯ್, ರಾಜಾನಾಯಕ್, ಸುಷ್ಮಾ, ಮಹದೇವಿ, ಅಯ್ಯಪ್ಪ, ಸೋಮಶೇಖರ್, ತಂಗಮಣಿ, ಸಿದ್ದಿಕ್ ಪಾಷಾ ಮೇಲೆ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕರಿಯಪ್ಪನ ಮಗನ ಹೇಳಿಕೆ:ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಸೋಮವಾರ ನಮ್ಮ ಮನೆಗೆ ಬಂದರು. ನನ್ನನು ಹಾಗೂ ತಂಗಿಯನ್ನು ಎಳೆದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ನಿಮ್ಮ ತಂದೆ ಎಲ್ಲಿ ತೋರಿಸಿ ಎಂದು ಬೆದರಿಸಿದರು. ಇಲ್ಲದಿದ್ದರೆ ಕುಟುಂಬ ಸಮೇತ ನಿಮ್ಮೆಲ್ಲರಿಗೂ ಗುಂಡು ಹಾರಿಸುವುದಾಗಿ, ಪೆಟ್ರೋಲ್ ಸುರಿದು ಮನೆಯನ್ನು ಸುಡುವುದಾಗಿಯೂ ಬೆದರಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಮೈಸೂರು: ಅರಣ್ಯ ಇಲಾಖೆಯ ವಿಚಾರಣೆಯಲ್ಲಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು

ಅದೇ ದಿನ ಮಧ್ಯಾಹ್ನ 2.30ರ ವೇಳೆಯಲ್ಲಿ ಬಹಿರ್ದೆಸೆಗೆ ಹೋಗಿದ್ದ ತಂದೆ ಕರಿಯಪ್ಪನನ್ನು ಅರಣ್ಯ ಇಲಾಖೆಯವರು ಎಳೆದೊಯ್ದಿದ್ದಾರೆ. ಮಂಗಳವಾರ ಸಂಜೆ 6.30ರಲ್ಲಿ ಡಿಆರ್ಎಫ್ಓ ಕಾರ್ತಿಕ್ ಯಾದವ್ ಅವರು ತಮ್ಮ ಸಂಬಂಧಿಕರಿಂದ ರವಿ ಎಂಬುವರಿಗೆ ಕರೆ ಮಾಡಿ, ಕರಿಯಪ್ಪನನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ರವಿ ಅವರು ಹೋಗಿ ನೋಡಿದಾಗ ಅರಣ್ಯ ಇಲಾಖೆಯವರು ನೀಡಿದ ಚಿತ್ರಹಿಂಸೆಯಿಂದ ಕರಿಯಪ್ಪ ತೀವ್ರ ಅಸ್ವಸ್ಥಗೊಂಡ ಪರಿಸ್ಥಿತಿಯಲ್ಲಿದ್ದರು. ನಂತರ ಅವರನ್ನು ಮನೆಗೆ ಕರೆತರಲು ರವಿ ನಿರಾಕರಿಸಿದರು. ಬಳಿಕ ಅರಣ್ಯ ಇಲಾಖೆಯವರೇ ಮೈಸೂರಿಗೆ ನನ್ನ ತಂದೆಯನ್ನು ಕರೆದೊಯ್ದರು ಎಂದು ದೂರಿನಲ್ಲಿ ಸತೀಶ ವಿವರಿಸಿದ್ದಾರೆ.

ಹೆಚ್ ಡಿ ಕೋಟೆ ತಹಶೀಲ್ದಾರ್ ಹೇಳಿಕೆ: ಅರಣ್ಯ ಇಲಾಖೆ ಸಿಬ್ಬಂದಿ ವಶದಲ್ಲಿದ್ದ ಗಿರಿಜನ ವ್ಯಕ್ತಿ ಸಾವಿಗೀಡಾದ ಹಿನ್ನೆಲೆ ಹೆಚ್.ಡಿ.ಕೋಟೆ ತಹಶೀಲ್ದಾರ್ ರತ್ನಾಂಬಿಕಾ ಮೈಸೂರಿನ ಶವಾಗಾರಕ್ಕೆ ಆಗಮಿಸಿ, ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನನಗಿಲ್ಲ. ಮೃತರ ಕುಟುಂಬದವರಿಗೆ ಸಾಂತ್ವನ ಹೇಳುವುದರ ಜೊತೆ ಘಟನೆಯ ಬಗ್ಗೆ ವಿವರ ಪಡೆಯಲು ಉಪ ವಿಭಾಗಾಧಿಕಾರಿಗಳ ಸೂಚನೆ ಮೇರೆಗೆ ಬಂದಿದ್ದೇನೆ.ಆದರೆ ಇಲ್ಲಿ ಮೃತನ ಕುಟುಂಬಸ್ಥರಾಗಲೀ, ಅರಣ್ಯ ಇಲಾಖೆಯವರಾಗಲೀ ಯಾರೂ ಇಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಹಲ್ಲೆಯಿಂದಲೇ ಕರಿಯಪ್ಪ ಸಾವನ್ನಪ್ಪಿರುವುದು ದೃಢಪಟ್ಟರೆ, ಕಾನೂನು ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details