ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಈ ಬಾರಿ ವಿಶೇಷ ದೀಪಾಲಂಕಾರ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ದಸರಾ ಮಹೋತ್ಸವದ ದೀಪಾಲಂಕಾರ ಕುರಿತು ಸಭೆಯಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಬಾರಿ ಅದ್ಧೂರಿ ಹಾಗೂ ಸಾಂಪ್ರದಾಯಿಕ ದಸರಾದ ಹಿನ್ನೆಲೆಯಲ್ಲಿ ವಿಶೇಷ ದೀಪಾಲಂಕಾರ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಮೈಸೂರು ನಗರದ ಸುತ್ತಮುತ್ತಲು ಸುಮಾರು 124 ಕಿ.ಮೀ ಸುತ್ತ, 96 ವೃತ್ತಗಳಲ್ಲಿ ವಿಶೇಷ ದೀಪಾಲಂಕಾರ ಮಾಡಲು ನಿರ್ಧರಿಸಲಾಗಿದೆ.
ದಸರಾ ದೀಪಾಲಂಕಾರ ವ್ಯವಸ್ಥೆ ಕುರಿತು ಸಭೆ ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸೇರಿದಂತೆ 28 ವಿವಿಧ ಬಗೆಯ ಪ್ರತಿಕೃತಿಗಳನ್ನು ದಸರಾ ದೀಪಾಲಂಕರದಲ್ಲಿ ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಲಾಗುವುದು. ಪ್ರತಿ ವರ್ಷದಂತೆ ರಾತ್ರಿ 7 ಗಂಟೆಯಿಂದ 10.30ರ ವರೆಗೆ ದೀಪಾಲಂಕಾರ ವಿಸ್ತರಣೆಗೆ ಅವಕಾಶ ಮಾಡಲಾಗಿದ್ದು, ಈ ಬಾರಿ ಅರ್ಧ ಗಂಟೆಗೂ ಹೆಚ್ಚು ಕಾಲ ಅಂದರೆ ರಾತ್ರಿ 11 ಗಂಟೆವರೆಗೆ ದೀಪಾಲಂಕಾರ ಮಾಡಲು ಚಿಂತನೆ ನಡೆಸಲಾಗಿದೆ. ವಿಮಾನ ನಿಲ್ದಾಣದಿಂದ ಮೈಸೂರಿನವರೆಗೆ ದೀಪಾಲಂಕಾರ ಮಾಡಲು ಸಿದ್ಧತೆ ನಡೆಸಲಾಗಿದ್ದು, ಈ ಬಾರಿ ಅದ್ದೂರಿ ದಸರಾದಲ್ಲಿ ಅದ್ಧೂರಿ ದೀಪಾಲಂಕಾರ ವ್ಯವಸ್ಥೆ ಇರುತ್ತದೆ ಎಂದು ಸಂಸದರು ಮಾಹಿತಿ ನೀಡಿದ್ರು.
ಇದನ್ನೂ ಓದಿ:ಮೈಸೂರಿನಲ್ಲಿ ಅದ್ಧೂರಿ ದಸರಾ : ಸರ್ಕಾರದಿಂದ ನೆರವಿನ ನಿರೀಕ್ಷೆಯಲ್ಲಿ ಟಾಂಗಾವಾಲಾಗಳು