ಮಂಡ್ಯ :ನಾನು ಜಿಲ್ಲಾ ಮಂತ್ರಿ ಆಗಿದ್ದಾಗ ಶಬ್ದ ಬಂತು ಎಂದು ಸಂಪೂರ್ಣ ಗಣಿಗಾರಿಕೆಯನ್ನು ನಿಷೇಧ ಮಾಡಿದ್ದೆ. ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ನಿಜವಾದ ತೊಂದರೆ ಇದ್ಯಾ ಇಲ್ಲವಾ ಎಂದು ಸರ್ಕಾರ ಪರಿಶೀಲನೆ ಮಾಡಬೇಕು ಎಂದು ಮಾಜಿ ಸಚಿವ ಸಿ ಎಸ್ ಪುಟ್ಟರಾಜು ತಿಳಿಸಿದರು. ಇಂದು ಪಾಂಡವಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿ ಇಲಾಖೆಗೆ 20 ಲಕ್ಷ ನೀಡಿ ಶಬ್ಧದ ಕುರಿತು ತನಿಖೆ ಮಾಡಲು ಆದೇಶ ನೀಡಿದ್ದೆವು. ಹೀಗಾಗಿ, ತಜ್ಞರು ಇದರ ಬಗ್ಗೆ ತನಿಖೆ ಮಾಡಲು ಬಂದಿದ್ದರು. ಆ ವೇಳೆ ತಜ್ಞರನ್ನು ಕೆಲವರು ತಡೆದರು ಎಂದು ಹೇಳಿದರು.
ಕನ್ನಂಬಾಡಿ ಕಟ್ಟೆ ಸುರಕ್ಷಿತವಾಗಿರಬೇಕು ಎನ್ನೋದೆ ನಮ್ಮ ಆಸೆ. ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ನಿಜವಾದ ತೊಂದರೆ ಇದ್ಯಾ ಇಲ್ಲವಾ ಎಂದು ಸರ್ಕಾರ ಪರಿಶೀಲನೆ ಮಾಡಬೇಕು. ಕಳೆದ ಮೂರು ವರ್ಷಗಳ ಹಿಂದೆಯೇ ನಮ್ಮ ಕುಟುಂಬದವರೆಲ್ಲರನ್ನೂ ಬೇಬಿಬೆಟ್ಟದಿಂದ ಶಿಫ್ಟ್ ಮಾಡಿಸಿದ್ದೇನೆ.
ಕನ್ನಂಬಾಡಿ ಕಟ್ಟೆ ವಿಚಾರ ಬಂದಾಗ ನನ್ನ ಬುಡಕ್ಕೆ ತರುತ್ತಾರೆ ಎಂದು ಗೊತ್ತು. ರಾಜಕೀಯವಾಗಿ ಬುಡಕ್ಕೆ ತರಬೇಕು ಎಂದು ಹಲವರು ಪ್ರಯತ್ನಪಟ್ಟರು. ಹೀಗಾಗಿ, ನಾನು ಯಾವುದೇ ಕಾರಣಕ್ಕೂ ಇಲ್ಲಿ ಗಣಿಗಾರಿಕೆ ಮಾಡಬಾರದು ಎಂದು ಶಿಫ್ಟ್ ಮಾಡಿಸಿದ್ದೇನೆ ಎಂದರು. ಬೇಬಿಬೆಟ್ಟದಲ್ಲಿ ಎಲ್ಲಾ ಪಕ್ಷದವರು ಎಲ್ಲಾ ಸಮುದಾಯದವರು ಗಣಿಗಾರಿಕೆ ಮಾಡುತ್ತಿದ್ದಾರೆ. ಸಾವಿರಾರು ಜನರು ಹೊಟ್ಟೆ ಪಾಡನ್ನು ಮಾಡುತ್ತಿದ್ದಾರೆ. ಇಲ್ಲಿಂದ ತೊಂದರೆ ಇದೆ ಎಂದರೆ ಇಲ್ಲಿಯವರಿಗೆ ಬೇರೆ ಕಡೆ ಅವಕಾಶ ನೀಡಿ ಎಂದು ಸಲಹೆ ನೀಡಿದರು.
ಇದು ಬಳ್ಳಾರಿ ಮೈನ್ಸ್‌ನನ್ನು ಚೀನಾಗೆ ಕೊಡುವ ಸ್ಕೀಮ್ ಅಲ್ಲ. ಚಿನಕುರುಳಿಯ ಸರ್ವೇ ನಂ.ನಲ್ಲಿ ಕೈಕುಳಿ ಗಣಿಗಾರಿಕೆ ಅವಕಾಶ ನೀಡಬೇಕು. ಬೇಬಿಬೆಟ್ಟದಲ್ಲಿ ಆದಷ್ಟು ಬೇಗ ಟ್ರಯಲ್ ಬ್ಲಾಸ್ಟ್ ಮಾಡಬೇಕು. ರಾಜಧನ ಮೋಸ ಮಾಡಲು ಯಾವುದೇ ಕಾರಣಕ್ಕೂ ಆಗಲ್ಲ. ಸಂಬಂಧಪಟ್ಟ ಅಧಿಕಾರಿಗಳು ರಾಜಧನ ಉಳಿಸಿಕೊಂಡಿರುವವರ ಹೆಸರನ್ನು ಹೊರ ತೆಗೆಯಬೇಕು ಎಂದು ಹೇಳಿದರು.
ಕೆಆರ್‌ಎಸ್ ಹಾಗೂ ಬೇಬಿಬೆಟ್ಟಕ್ಕೆ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಬೇಬಿಬೆಟ್ಟದಲ್ಲಿ ಅಧಿಕಾರಿಗಳೇ ಟ್ರಂಚ್ ಹೊಡೆಸಿದ್ದಾರೆ. ಸಂಸದರು ಅಲ್ಲಿಗೆ ಹೋಗಬೇಕು ಅಂದರೆ ಅದನ್ನು ತೆರವು ಮಾಡಿ ಕೊಡಿ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಸಂಸದರಿಗೆ ಎಲ್ಲಾ ಮಾಹಿತಿಯನ್ನು ನೀಡುವಂತೆ ಸೂಚನೆ ನೀಡಿದ್ದೇನೆ ಎಂದರಲ್ಲದೇ, ನನ್ನ ಕರೆದರೆ ಶಾಸಕನಾಗಿ ಹೋಗಲು ತೊಂದರೆ ಇಲ್ಲ. ಕರೆದರೆ ನಾನೇ ಹೋಗಿ ಎಲ್ಲಿಗೆ ಹೋಗಬೇಕು ಅನ್ನೋದನ್ನು ತೋರಿಸಿಕೊಡುತ್ತೇನೆ.
ಪುಟ್ಟರಾಜು ಕಾಂಗ್ರೆಸ್‌ಗೆ ಹೋಗುತ್ತಾರೆ ಎಂದು ರಾಕ್‌ಲೈನ್ ವೆಂಕಟೇಶ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಕಾಂಗ್ರೆಸ್‌ಗೆ ಹೋಗುವ ಅಗತ್ಯವಿಲ್ಲ. ನನಗೆ ದೇವೇಗೌಡರೇ ರಾಜಕೀಯಕ್ಕೆ ತಂದಿರುವುದು. ರಾಜಕೀಯ ಮಾಡುವುದಾದರೆ ದೇವೇಗೌಡರ ಜೊತೆಯಲ್ಲೇ ಮಾಡುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದರು.
ಜೆಡಿಎಸ್ ನಾಯಕರು ಸುಮಲತಾ ನಡುವಿನ ಫೈಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ವರಿಷ್ಠರಾದ ದೇವೇಗೌಡರು ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ. ಈವರೆಗೆ ನಡೆದ ಬೆಳವಣಿಗೆಯ ಬಗ್ಗೆ ಸ್ಪಷ್ಟೀಕರಣ ನೀಡಬಾರದು ಎಂದು ಹೇಳಿದ್ದಾರೆ. ನಾವು ಇದರ ಬಗ್ಗೆ ಯಾವುದೇ ಹೇಳಿಕೆ ನೀಡಲ್ಲ ಎಂದರು.