ಮಂಡ್ಯ:ಕ್ಷೇತ್ರದಲ್ಲಿ ಈಗ ಅಭ್ಯರ್ಥಿಗಳ ಮನೆಯ ಮಾತೇ ಆಗಿದೆ. ಯಾರು ಮನೆ ಮಾಡಿದರು, ಎಲ್ಲಿ ಮನೆ ಮಾಡಿದರು ಎಂಬ ಪ್ರಶ್ನೆ ಕ್ಷೇತ್ರದ ಜನರಲ್ಲಿ ಕುತೂಹಲ ಮೂಡಿಸಿದೆ. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ರ ಮನೆಯದ್ದೇ ಚರ್ಚೆ ಆಗುತ್ತಿದೆ.
ಸುಮಲತಾ ಅಂಬರೀಶ್ ಕಳೆದ ರಾತ್ರಿ ಮನೆಯೊಂದನ್ನು ನೋಡಿ ಒಪ್ಪಿಗೆ ಸೂಚಿಸಿದ್ದಾರೆ. ಆ ಮನೆ ಬೇರೆ ಯಾವುದೂ ಅಲ್ಲ, ಅದು ಅಂಬರೀಶ್ಗೆ ಲಕ್ಕಿ ಮನೆ ಎಂದೇ ಬಿಂಬಿತವಾಗಿದ್ದ ಚಾಮುಂಡೇಶ್ವರಿ ನಗರದ ಮನೆ. 2013ರ ವಿಧಾನಸಭಾ ಚುನಾವಣೆ ವೇಳೆ ಈ ಮನೆಯಲ್ಲೇ ಅಂಬಿ ಇದ್ದರು. ಈ ಮನೆ ಮಾಡಿದ ನಂತರ ಸತತ ಎರಡು ಸೋಲಿನ ನಂತರ ಗೆಲುವು ಸಾಧಿಸಿದ್ದರು.
ಕಳೆದ ರಾತ್ರಿ ಅಂಬಿ ಇದ್ದ ಮನೆಯನ್ನೇ ನೋಡಿ ಗೃಹ ಪ್ರವೇಶದ ದಿನಾಂಕವನ್ನು ಸುಮಲತಾ ಅಂಬರೀಶ್ ಗುರುತು ಮಾಡಿದ್ದಾರೆ. ಆದರೆ ಇದನ್ನು ಸುಮಲತಾ ತಮ್ಮ ಕಚೇರಿಯನ್ನಾಗಿ ಮಾಡಲಿದ್ದಾರೆ. ತಮ್ಮ ಮಾವನ ಕಡೆಯಿಂದ ಬಂದಿರುವ ನಿವೇಶನದಲ್ಲೇ ಅವರು ಮನೆಯನ್ನ ಶೀಘ್ರವೇ ನಿರ್ಮಿಸಲಿದ್ದಾರೆ ಎಂದು ಹೇಳಲಾಗ್ತಿದೆ.
ಮಂಡ್ಯದ ಮಂಜುನಾಥ ನಗರದ 2ನೇ ಕ್ರಾಸ್ನಲ್ಲಿ 60*40ರ ಅಳತೆಯ ನಿವೇಶನವಿದೆ. ಅಲ್ಲಿ ಸ್ವಂತ ಮನೆಯನ್ನು ಶೀಘ್ರವಾಗಿ ನಿರ್ಮಾಣ ಮಾಡಲಿದ್ದಾರೆ. ಅಲ್ಲಿವರೆಗೂ ಚಾಮುಂಡೇಶ್ವರಿ ನಗರದ ಬಾಡಿಗೆ ಮನೆಯನ್ನೇ ಕಚೇರಿ ಜೊತೆಗೆ ಮನೆಯನ್ನಾಗಿ ಮಾಡಿಕೊಳ್ಳಲಿದ್ದಾರೆ.