ಮಂಡ್ಯ: ಇಂದು ಎಲ್ಲೆಡೆ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ತಮ್ಮ ತಮ್ಮ ಆಚರಣೆ, ಪದ್ಧತಿಗನುಗುಣವಾಗಿ ಶಿವಭಕ್ತರು ಶಿವನಿಗೆ ವಿಶೇಷ ಪೂಜೆ ಅರ್ಪಿಸಿ ತಮ್ಮ ಭಕ್ತಿ ಮೆರೆಯುತ್ತಾರೆ. ಮುತ್ತುಗದ ಹೂವು ಶಿವನಿಗೆ ಅತ್ಯಂತ ಪ್ರಿಯವಾದ ಹೂವು. ಈ ಹೂವು ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಮಾತ್ರ ಬಿಡಲಿದೆ. ಶಿವರಾತ್ರಿ ಹಬ್ಬದ ವಿಶೇಷವೇ ಈ ಹೂವು. ಮುತ್ತುಗದ ಮರದಲ್ಲಿ ಬಿಡುವ ಕೆಂಪು ಬಣ್ಣದ ಮುತ್ತುಗದ ಹೂವನ್ನು ಶಿವರಾತ್ರಿ ಹಬ್ಬದಂದು ಶಿವನ ಪೂಜೆಗೆ ಅರ್ಪಿಸಲಾಗುತ್ತದೆ. ಹಾಗಾದ್ರೆ ಇದರ ವಿಶೇಷತೆ ಏನು? ಇಲ್ಲಿದೆ ಕೆಲ ಮಾಹಿತಿ.
ಶಿವನಿಗೆ ಮುತ್ತುಗದ ಹೂವು ಹೆಚ್ಚಾಗಿ ಅರಳಿದರೆ ಆ ವರ್ಷ ಉತ್ತಮ ಮಳೆ, ಬೆಳೆಯಾಗುತ್ತದೆ ಎಂಬುದು ಭಕ್ತರ ನಂಬಿಕೆ. ಈ ಬಾರಿ ಕೆಂಪು ವರ್ಣದ ಮುತ್ತುಗದ ಹೂವು ಮಂಡ್ಯ ಜಿಲ್ಲೆಯ ಎಲ್ಲೆಡೆ ಅರಳಿ ನಿಂತಿದ್ದು, ರೈತನ ಮೊಗದಲ್ಲಿ ಮಂದಹಾಸ ಮೂಡಿಸುತ್ತಿದೆ. ಈ ಹೂವು ಅರಳಿದಾಗ ಎಲೆಗಳ ಸಂಖ್ಯೆ ಕ್ಷೀಣಿಸಿರುತ್ತದೆ. ಶಿವನಿಗೆ ಮಾತ್ರ ಮುತ್ತುಗದ ಹೂವನ್ನು ಅರ್ಪಿಸಲಾಗುತ್ತದೆ ಎನ್ನುತ್ತಾರೆ ಶಿವನ ಭಕ್ತ ಸಿದ್ದಪ್ಪ.
ಮುತ್ತುಗದ ಮರದಲ್ಲಿ ಶಿವರಾತ್ರಿ ಹಬ್ಬದ ಸಮಯದಲ್ಲಿ ಹೂವು ಬಿಡುತ್ತದೆ. ಇದರ ಸೌಂದರ್ಯಕ್ಕೆ ಮಾರು ಹೋಗಿರುವ ಆಸ್ತಿಕರು ಶಿವರಾತ್ರಿ ಹಬ್ಬದಂದು ತಮ್ಮ ನೆಚ್ಚಿನ ದೈವ ಶಿವನಿಗೆ ಮುತ್ತುಗದ ಹೂವನ್ನು ಸಮರ್ಪಿಸಿ ಪೂಜೆ ಸಲ್ಲಿಸುವುದು ಸಾಮಾನ್ಯ. ಈ ಮರದ ಚಕ್ಕೆಯನ್ನು ಹೋಮಗಳಲ್ಲೂ ಕೂಡ ಬಳಸುತ್ತಾರೆ. ಹೀಗಾಗಿ ಮುತ್ತುಗದ ಹೂವು ಪ್ರಕೃತಿಯ ಚೆಲುವನ್ನು ಹೆಚ್ಚಿಸಿರುವುದರ ಜೊತೆಗೆ ಧಾರ್ಮಿಕವಾಗಿಯೂ ಮಹತ್ವ ಪಡೆದುಕೊಂಡಿದೆ. ಈ ಎಲ್ಲ ಕಾರಣಗಳಿಗಾಗಿಯೇ ಶಿವರಾತ್ರಿ ಹಬ್ಬದ ದಿನವಾದ ಇಂದು ಶಿವನ ಪೂಜೆಗೆ ಮುತ್ತುಗದ ಹೂವು ವಿಶೇಷವಾಗಿ ಸಮರ್ಪಣೆಯಾಗುತ್ತಿದೆ.